ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ ಸಿಕ್ಕಿರುವ ಕಂತೆ ಕಂತೆ ನೋಟುಗಳನ್ನು ಎಣಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ತನ್ನ ರಾಜ್ಯಸಭಾ ಸಂಸದನಿಂದ ಅಂತರ ಕಾಯ್ದುಕೊಂಡಿದೆ. ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, ಧೀರಜ್ ಸಾಹು ಅವರ ಉದ್ಯಮಕ್ಕೂ ಕಾಂಗ್ರೆಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ. ಈ ಮೂಲಕ ಪಕ್ಷಕ್ಕೆ ಎದುರಾಗುವ ಮುಜುಗರ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, "ಆದಾಯ ತೆರಿಗೆ ಅಧಿಕಾರಿಗಳು ಹೇಗೆ ಅಪಾರ ಪ್ರಮಾಣದ ಹಣವನ್ನು ಪತ್ತೆ ಮಾಡಿದ್ದಾರೆ ಎಂದು ಅವರು ಮಾತ್ರ ವಿವರಿಸಬಹುದು. ಇದಕ್ಕೆ ಸ್ಪಷ್ಟನೆಯನ್ನು ಧೀರಜ್ ಸಾಹು ಅವರಲ್ಲೇ ಕೇಳಬೇಕು. ಕಾಂಗ್ರೆಸ್ ಪಕ್ಷವು ಧೀರಜ್ ಸಾಹು ಅವರ ವ್ಯವಹಾರಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ತೆರಿಗೆ ಅಧಿಕಾರಿಗಳು ಅವರ ಕಚೇರಿಗಳಿಂದ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಹೊರತೆಗೆಯುತ್ತಿದ್ದಾರೆ ಎಂದು ಅವರೇ ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದ್ದಾರೆ.
ತೆರಿಗೆ ಇಲಾಖೆ ಧೀರಜ್ ಪ್ರಸಾದ್ ಸಾಹು ಅವರಿಗೆ ಸಂಬಂಧಿಸಿದ ಕೆಲವು ಪ್ರದೇಶಗಳಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿರುವುದನ್ನು ನೋಡಿದರೆ, ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಸಂಪ್ರದಾಯವನ್ನು ಪೀಳಿಗೆಯಿಂದ ಪೀಳಿಗೆಗೆ ಹೇಗೆ ಜೀವಂತವಾಗಿಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಒಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ತೆರಿಗೆ ಇಲಾಖೆ ನಡೆಸಿದ ಶೋಧ ಕಾರ್ಯದಲ್ಲಿ ಇದುವರೆಗೆ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ವಶಪಡಿಸಿಕೊಂಡ ಮೊತ್ತವು 290 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ. ಇದು ಯಾವುದೇ ಏಜೆನ್ಸಿಯಿಂದ ಒಂದೇ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ "ಇದುವರೆಗಿನ ಅತ್ಯಧಿಕ" ಕಪ್ಪು ಹಣ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ:ಒಡಿಶಾ ಐಟಿ ದಾಳಿ ಪ್ರಕರಣ: ಮತ್ತೆ 20 ಬ್ಯಾಗ್ ವಶಕ್ಕೆ, ಜಪ್ತಿ ಹಣ ₹ 290 ಕೋಟಿಗೆ ತಲುಪುವ ಸಾಧ್ಯತೆ
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ನಾಯಕಿ ಹಾಗೂ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, "ಸಾಹು ಅವರಿಂದ ವಶಪಡಿಸಿಕೊಂಡ ನಗದು ಅತಿದೊಡ್ಡ ಪ್ರಮಾಣದಲ್ಲಿದೆ. ಇದು ಕಾಂಗ್ರೆಸ್ ಭ್ರಷ್ಟಾಚಾರವನ್ನು ಹೇಗೆ ಹರಡಿದೆ ಎಂಬುದನ್ನು ತೋರಿಸುತ್ತದೆ. ಮುಂದಿನ ಪೀಳಿಗೆಗೆ ಭ್ರಷ್ಟಾಚಾರದ ಸಂಪ್ರದಾಯವನ್ನು ಜೀವಂತವಾಗಿ ಇರಿಸಲಾಗಿದೆ. ಕೇವಲ ಒಬ್ಬ ಕಾಂಗ್ರೆಸ್ ನಾಯಕನಿಂದ 300 ಕೋಟಿ ರೂ. ವಸೂಲಿಯಾಗಿದೆ ಮತ್ತು ಇನ್ನೂ ಎಣಿಕೆ ನಡೆಯುತ್ತಿದೆ. ಕಾಂಗ್ರೆಸ್ನ ಎಲ್ಲಾ ಭ್ರಷ್ಟ ನಾಯಕರನ್ನು ಒಟ್ಟಿಗೆ ಇಟ್ಟುಕೊಂಡರೆ, ಎಷ್ಟು ನೋಟುಗಳನ್ನು ವಶಪಡಿಸಿಕೊಳ್ಳಬಹುದು ಎಂದು ಊಹಿಸಿ" ಎಂದು ಅವರು ಟೀಕಿಸಿದರು.
ಬಿಜೆಪಿಯ ಜಾರ್ಖಂಡ್ ಘಟಕದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಕಾಂಗ್ರೆಸ್ ರಾಜ್ಯಸಭಾ ಸಂಸದರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.