ಅಜ್ಮೀರ್(ರಾಜಸ್ಥಾನ):ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಅನಸಾಗರ್ ಸರೋವರದಿಂದ 2 ಸಾವಿರ ರೂಪಾಯಿ ಮೌಲ್ಯದ 30ಕ್ಕೂ ಹೆಚ್ಚು ಕಟ್ಟುಗಳ ನೋಟು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನೋಟುಗಳು ಅಸಲಿಯೋ ಅಥವಾ ನಕಲಿಯೋ ಎಂಬುದನ್ನ ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಈ ನೋಟಿನ ಕಟ್ಟುಗಳನ್ನ ಪಾಲಿಥಿನ್ ಚೀಲಗಳಲ್ಲಿ ಹಾಕಿ, ಸರೋವರಕ್ಕೆ ಎಸೆಯಲಾಗಿದೆ. ಸುಮಾರು 30ಕ್ಕೂ ಹೆಚ್ಚು ಬಂಡಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹೆಚ್ಚಿನ ತನಿಖೆಗೋಸ್ಕರ ಈಗಾಗಲೇ ಬ್ಯಾಂಕಿಂಗ್ ತಜ್ಞರ ಬಳಿ ಕಳುಹಿಸಿಕೊಡಲಾಗಿದೆ. ಇಷ್ಟೊಂದು ಹಣ ಲಭ್ಯವಾಗಿರುವ ಕಾರಣ ಪೊಲೀಸ್ ಇಲಾಖೆ ಕಂಗಾಲಾಗಿದೆ.
ಇದನ್ನೂ ಓದಿ:ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ : ಮೂವರು ಐಟಿ ಅಧಿಕಾರಿಗಳ ವಿರುದ್ಧ ಕೇಸ್
ಸರೋವರದಲ್ಲಿ ನಕಲಿ ನೋಟುಗಳು ತೇಲುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿತ್ತು. ಆದರೆ, ಮೇಲ್ನೋಟಕ್ಕೆ ಇವು ಅಸಲಿ ಎಂದು ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅನಸಾಗರ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿ ಬಲ್ದೇವ್ ಚೌಧರಿ, ಸರೋವರದಲ್ಲಿ ಪಾಲಿಥಿನ್ ಬ್ಯಾಗ್‌ಗಳಲ್ಲಿ ಹಾಕಲಾಗಿದ್ದ ನೋಟು ತೇಲುತ್ತಿರುವ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಬಂದಿದೆ. ಸ್ಥಳಕ್ಕಾಗಮಿಸಿ ಕರೆನ್ಸಿ ನೋಟು ಹೊರತೆಗೆದಿದ್ದೇವೆ ಎಂದಿದ್ದಾರೆ.
ಸ್ಥಳದಿಂದ ಸುಮಾರು 30 ರಿಂದ 32 ನೋಟಿನ ಬಂಡಲ್ ಪತ್ತೆಯಾಗಿದ್ದು, ಕೆಲ ಅಪರಿಚಿತ ವ್ಯಕ್ತಿಗಳು ಕರೆನ್ಸಿ ನೋಟುಗಳನ್ನ ಪಾಲಿಥಿನ್ ಚೀಲಗಳಲ್ಲಿ ಹಾಕಿ ಕೆರೆಗೆ ಎಸೆದಿರುವ ಸಂಶಯವಿದೆ. ಇವುಗಳ ಪರಿಶೀಲನೆಗಾಗಿ ನಾವು ಬ್ಯಾಂಕಿಂಗ್ ತಜ್ಞರ ಬಳಿ ಕಳುಹಿಸಿಕೊಟ್ಟಿದ್ದೇವೆ ಎಂದಿದ್ದಾರೆ.