ನವದೆಹಲಿ: ಸ್ಥಳೀಯ ಡೇಟಾ ಸ್ಟೋರೇಜ್ ಮಾನದಂಡಗಳನ್ನು ಪಾಲಿಸದ ಕಾರಣ ಜುಲೈ 22 ರಿಂದ ಭಾರತದಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಮಾಸ್ಟರ್‌ಕಾರ್ಡ್‌ಗೆ RBI ನಿರ್ಬಂಧ ವಿಧಿಸಿದೆ. ಅಗತ್ಯ ಪ್ರಮಾಣದ ಸಮಯ ನೀಡಿದರೂ ಮತ್ತು ಅವಕಾಶಗಳನ್ನು ನೀಡಲಾಗಿದ್ದರೂ ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಶೇಖರಿಸಿಡುವ ನಿರ್ದೇಶನಗಳಿಗೆ ಈ ಸಂಸ್ಥೆಯು ಬದ್ಧವಾಗಿಲ್ಲ ಎಂದು ಆರ್‌ಬಿಐ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಆದೇಶವು ಮಾಸ್ಟರ್‌ಕಾರ್ಡ್‌ನ ಈಗಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಕಾರ್ಡ್ ನೀಡುವ ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಮಾಸ್ಟರ್ ಕಾರ್ಡ್ ಸಲಹೆ ನೀಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ 2007 (ಪಿಎಸ್‌ಎಸ್ ಕಾಯ್ದೆ) 17ರ ಅಡಿಯಲ್ಲಿ ಆರ್‌ಬಿಐಗೆ ಇರುವ ಅಧಿಕಾರವನ್ನು ಚಲಾಯಿಸಿ ಮೇಲ್ವಿಚಾರಣೆ ಕ್ರಮ ಕೈಗೊಳ್ಳಲಾಗಿದೆ. ಮಾಸ್ಟರ್‌ಕಾರ್ಡ್ ಎನ್ನುವುದು ಪಿಎಸ್‌ಎಸ್ ಕಾಯ್ದೆಯಡಿ ದೇಶದಲ್ಲಿ ಕಾರ್ಡ್ ನೆಟ್‌ವರ್ಕ್ ನಿರ್ವಹಿಸಲು ಅಧಿಕಾರ ಹೊಂದಿರುವ ಪಾವತಿ ವ್ಯವಸ್ಥೆ ಆಪರೇಟರ್ ಆಗಿದೆ.