ಹೈದರಾಬಾದ್ (ತೆಲಂಗಾಣ): ವಿಶ್ವದ ಅತಿ ದೊಡ್ಡ ಫಿಲಂ ಸಿಟಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಲ್ಲಿನ ರಾಮೋಜಿ ಫಿಲಂ ಸಿಟಿ ಇಂದಿನಿಂದ (ಫೆ.18) ಮತ್ತೆ ಪ್ರೇಕ್ಷಕರ ವೀಕ್ಷಣೆಗೆ ತೆರೆದುಕೊಂಡಿದೆ. ಫಿಲಂ ಸಿಟಿಯ ದರ್ಶನ ಆರಂಭದ ಮೊದಲ ದಿನವೇ ಸಾವಿರಾರು ಪ್ರೇಕ್ಷಕರು ಆಗಮಿಸಿ, ಫಿಲಂ ಸಿಟಿಯ ಅದ್ದೂರಿ ವೈಭವವನ್ನು ಕಣ್ತುಂಬಿಕೊಂಡರು.
ವಿಶ್ವದ ಅತಿ ದೊಡ್ಡ ಫಿಲಂ ಸಿಟಿ ಎಂದು ಗಿನ್ನೀಸ್ ವಿಶ್ವ ದಾಖಲೆಯನ್ನು ಹೊಂದಿರುವ ರಾಮೋಜಿ ಫಿಲಂ ಸಿಟಿಯನ್ನು ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಮಾರ್ಚ್ನಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈಗ ಫಿಲಂ ಸಿಟಿ ಮತ್ತೆ ಪ್ರೇಕ್ಷಕರಿಗಾಗಿ ತೆರೆದಿದ್ದು, ಫಿಲಂ ಸಿಟಿಯ ಕಣ್ಣು ಕೋರೈಸುವ ವೈಭವವನ್ನು ವೀಕ್ಷಿಸಲು ಪ್ರೇಕ್ಷಕರ ದಂಡೇ ಹರಿದುಬರತೊಡಗಿದೆ.
ಫಿಲಂ ಸಿಟಿಯುದ್ದಕ್ಕೂ ಹರಡಿರುವ ಎಲ್ಲ ಎಂಟರಟೇನ್ಮೆಂಟ್ ಜೋನ್ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗಿದ್ದು, ನೈರ್ಮಲ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಲಾಗುತ್ತಿದೆ. ಇನ್ನು ಪ್ರೇಕ್ಷಕರ ಮಧ್ಯೆ ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್ ಮಾರ್ಕಿಂಗ್ಗಳನ್ನು ಸಹ ಅಳವಡಿಸಿಕೊಳ್ಳಲಾಗಿದೆ. ಅತಿ ಹೆಚ್ಚು ಸ್ಪರ್ಶಕ್ಕೆ ಬರುವ ಎಲ್ಲ ಮೇಲ್ಮೈಗಳನ್ನು ಮೇಲಿಂದ ಮೇಲೆ ಡಿಸ್ಇನ್ಫೆಕ್ಟಂಟ್ಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ಪಡೆದ ಪರಿಣಿತರು ಪ್ರವಾಸಿಗರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಗೈಡ್ ಮಾಡುತ್ತಿದ್ದಾರೆ.