ನವದೆಹಲಿ :ರಕ್ಷಾಬಂಧನವು ನಮ್ಮ ಪ್ರಮುಖ ಹಬ್ಬಗಳಲ್ಲಿ ಒಂದು. ರಕ್ಷಾಬಂಧನವನ್ನು ಅಣ್ಣ ತಂಗಿಯರ ಹಬ್ಬ ಎಂದೂ ಕರೆಯುತ್ತಾರೆ. ದೇಶಾದ್ಯಂತ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಕ್ಷಾಬಂಧನದಂದು ಸಹೋದರಿಯರು ಅಣ್ಣಂದಿರಿಗೆ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯುತ್ತಾರೆ. ಈ ವೇಳೆ ಅಣ್ಣನು ತನ್ನ ಸಹೋದರಿಯ ರಕ್ಷಣೆ ಮಾಡುವುದಾಗಿ ವಾಗ್ದಾನ ಮಾಡುತ್ತಾನೆ. ರಕ್ಷಾ ಬಂಧನಕ್ಕೆ ಸಹೋದರಿಯೊಬ್ಬಳು ತನ್ನ ಅಣ್ಣನಿಗೆ ಕಿಡ್ನಿ ದಾನ ಮಾಡಿ ವಿಶೇಷ ಉಡುಗೊರೆ ನೀಡಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹರ್ಷೇಂದ್ರ ಎಂಬವರಿಗೆ ಸಹೋದರಿ ಪ್ರಿಯಾಂಕಾ ಈ ರಕ್ಷಾಬಂಧನಕ್ಕೆ ಎಂದೂ ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾರೆ.
ಹರ್ಷೇಂದ್ರ ಹಾಗೂ ಸಹೋದರಿ ಪ್ರಿಯಾಂಕ ಅವರು ದೆಹಲಿಯ ನಿವಾಸಿಗಳಾಗಿದ್ದಾರೆ. ಹರ್ಷೆಂದ್ರ ಅವರು ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಹರ್ಷೇಂದ್ರಗೆ ಆಯಾಸ ಮತ್ತು ವಿವಿಧ ರೀತಿಯ ಅನಾರೋಗ್ಯ ಕಾಡಿದಾಗ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ಈ ವೇಳೆ ವೈದ್ಯರು ಕಿಡ್ನಿ ವೈಫಲ್ಯವಾಗಿದ್ದು ಕೊನೆಯ ಹಂತದಲ್ಲಿ ಇರುವುದಾಗಿ ಹೇಳಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ಒಳಗಾದ ಹರ್ಷೇಂದ್ರ ಅವರು ನಿಯಮಿತವಾಗಿ ಡಯಾಲಿಸಿಸ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಸಂದರ್ಭದಲ್ಲಿ, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ಗೆ ಒಳಬೇಕಾದ ಪರಿಸ್ಥಿತಿ ಒದಗಿಬಂತು. ಇದರಿಂದಾಗಿ ಹರ್ಷೇಂದ್ರ ಅವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೆ ಇವರು ಉದ್ಯೋಗ ಮಾಡುತ್ತಿದ್ದ ಕಂಪೆನಿ ಅವರು ಅವರಿಗೆ ರಜೆಗಳನ್ನು ನೀಡಿ ಸಂಬಳ ಪಾವತಿಸಲು ಮುಂದಾಗಲಿಲ್ಲ. ಇದರಿಂದ ಹರ್ಷೇಂದ್ರ ಅವರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಹದಗೆಟ್ಟಿತು.