ನವದೆಹಲಿ: ಭಾರತೀಯ ಸೇನೆಯ ವಿವಾದಗಳನ್ನ ಪರಿಹರಿಸಲು, ಭದ್ರತಾ ಪರಿಸ್ಥಿತಿ ಪರಿಶೀಲಿಸಲು ಹಾಗೂ ಗಡಿ ರಸ್ತೆ ಸಂಸ್ಥೆ (ಬಿಆರ್ಒ) ನಿರ್ಮಿಸಿರುವ ರಸ್ತೆಗಳು, ಸೇತುವೆಗಳನ್ನು ಉದ್ಘಾಟಿಸುವ ಸಲುವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದಿನಿಂದ ಲಡಾಖ್ಗೆ ಮೂರು ದಿನಗಳ ಭೇಟಿ ಕೈಗೊಂಡಿದ್ದಾರೆ.
ನಿರಂತರ ಮಾತುಕತೆಗಳ ಫಲವಾಗಿ ಪ್ಯಾಂಗಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯ ಉದ್ದಕ್ಕೂ ಭಾರತ-ಚೀನಾ ತಮ್ಮ ಸೈನಿಕರನ್ನು ವಾಪಸ್ ಕರೆಯಿಸಿಕೊಂಡಿದ್ದವು. ಮೊನ್ನೆ ಶುಕ್ರವಾರ ಉಭಯ ರಾಷ್ಟ್ರಗಳ ನಡುವೆ ನಡೆದ 22ನೇ ಡಬ್ಲ್ಯುಎಂಸಿಸಿ ಸಭೆಯಲ್ಲಿ ಪೂರ್ವ ಲಡಾಖ್ ಪ್ರದೇಶದಲ್ಲಿನ ಬಾಕಿ ಸಮಸ್ಯೆಗಳನ್ನು ಪರಿಹರಿಸಲು ಸಹ ಒಪ್ಪಿಕೊಂಡಿವೆ.
ಚೀನಾ ಇತ್ತೀಚೆಗೆ ತನ್ನ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂದು ಭಾರತವನ್ನು ದೂಷಿಸಿತ್ತು. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ನಡೆಯುತ್ತಿರುವ ಉದ್ವಿಗ್ನತೆಗೆ ಕೇಂದ್ರ ಸರ್ಕಾರದ ಆಕ್ರಮಣಕಾರಿ ನೀತಿಗಳು ಕಾರಣ ಎಂದು ಚೀನಾದ ವಿದೇಶಾಂಗ ಸಚಿವಾಲಯ ಆರೋಪಿಸಿತ್ತು. ಇದರ ಬೆನ್ನಲ್ಲೇ ಲಡಾಖ್ಗೆ ಭೇಟಿ ನೀಡುತ್ತಿರುವ ರಕ್ಷಣಾ ಸಚಿವರು ಹಿರಿಯ ಮಿಲಿಟರಿ ಅಧಿಕಾರಿಗಳು, ಸೈನಿಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ರಾಜನಾಥ್ ಸಿಂಗ್ಗೆ ಸೇನಾ ಮುಖ್ಯಸ್ಥ ಎಂ ಎಂ ನರವನೆ ಸಾಥ್ ನೀಡಲಿದ್ದಾರೆ.
2020ರಲ್ಲಿ ಗಾಲ್ವಾನ್ ಸಂಘರ್ಷ ನಡೆದ ಬಳಿಕ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಮತ್ತಷ್ಟು ಹದಗೆಟ್ಟಿತ್ತು. ಇಲ್ಲಿಯವರೆಗೆ ಭಾರತ ಮತ್ತು ಚೀನಾ ಶಾಂತಿ ಸ್ಥಾಪನೆಗಾಗಿ 11 ಸುತ್ತು ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಿಕೊಂಡು ಬಂದಿವೆ.