ಕರ್ನಾಟಕ

karnataka

ETV Bharat / bharat

Raigad landslide: ಮೃತರ ಸಂಖ್ಯೆ 22ಕ್ಕೆ ಏರಿಕೆ.. ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ ಎನ್‌ಡಿಆರ್‌ಎಫ್

ರಾಯಗಡ ಜಿಲ್ಲೆಯಲ್ಲಿ ಇರ್ಶಲವಾಡಿ ಭೂಕುಸಿತದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಅವರಲ್ಲಿ 9 ಮಂದಿ ಪುರುಷರು, 9 ಮಂದಿ ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿದ್ದಾರೆ. ಇಂದು ಮತ್ತೆ ರಕ್ಷಣಾ ಕಾರ್ಯಾಚರಣೆ ಪುನಾರಂಭವಾಗಿದೆ.

Raigad landslide
ರಕ್ಷಣಾ ಕಾರ್ಯಾಚರಣೆ ಪುನರಾರಂಭಿಸಿದ ಎನ್‌ಡಿಆರ್‌ಎಫ್

By

Published : Jul 22, 2023, 2:02 PM IST

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲವಾಡಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತ ಈವರೆಗೆ ಕನಿಷ್ಠ 22 ಜನರನ್ನು ಬಲಿ ತೆಗೆದುಕೊಂಡಿದೆ. ಜತೆಗೆ 87 ಗ್ರಾಮಸ್ಥರು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಿಂದ 80 ಕಿ.ಮೀ ದೂರದಲ್ಲಿರುವ ಖಲಾಪುರ್ತೆಹಸಿಲ್ ವ್ಯಾಪ್ತಿಯ ಬೆಟ್ಟದ ಇಳಿಜಾರಿನಲ್ಲಿರುವ ಬುಡಕಟ್ಟು ಗ್ರಾಮ ಇರ್ಶಲವಾಡಿಯಲ್ಲಿ ಬುಧವಾರ ರಾತ್ರಿ ಭೂಕುಸಿತ ಸಂಭವಿಸಿತ್ತು. ಗುರುವಾರ ಸಂಜೆಯವರೆಗೆ ಸಾವಿನ ಸಂಖ್ಯೆ 16 ಆಗಿತ್ತು. ಶುಕ್ರವಾರ ಆರು ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 22ಕ್ಕೆ ಏರಿದೆ. 3ನೇ ದಿನವಾದ ಶನಿವಾರವೂ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಲಾಗಿದೆ.

ಮೃತಪಟ್ಟವರಲ್ಲಿ 9 ಮಂದಿ ಪುರುಷರು, 9 ಮಂದಿ ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿದ್ದಾರೆ. ದುರಂತದಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಇತರ ಸರ್ಕಾರಿ ಏಜೆನ್ಸಿಗಳ ಸಹಾಯದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಶನಿವಾರ ಬೆಳಗ್ಗೆ ಪುನಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಪುನರಾರಂಭ: ಭಾರಿ ಮಳೆಯಿಂದಾಗಿ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದರು. ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ಮತ್ತು ಇತರ ಏಜೆನ್ಸಿಗಳು ಇಂದು ಬೆಳಿಗ್ಗೆ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ ಎಂದು ಅವರು ಹೇಳಿದರು.

ಬೆಟ್ಟದ ಇಳಿಜಾರಿನಲ್ಲಿ ನೆಲೆಗೊಂಡಿರುವ ಗ್ರಾಮದ 48 ಮನೆಗಳಲ್ಲಿ ಕನಿಷ್ಠ 17 ಮನೆಗಳು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಂಪೂರ್ಣವಾಗಿ ಅಥವಾ ಭಾಗಶಃ ಸಿಲುಕಿವೆ. ರಾಯಗಡ ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿಯ ಪ್ರಕಾರ, 229 ಗ್ರಾಮದ ನಿವಾಸಿಗಳಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. 111 ಮಂದಿ ಸುರಕ್ಷಿತವಾಗಿದ್ದಾರೆ. 87 ಜನರು ಇನ್ನೂ ಪತ್ತೆಯಾಗಿಲ್ಲ. ಅವರಲ್ಲಿ ಕೆಲವರು ಮದುವೆಗೆ ಹಾಜರಾಗಲು ಗ್ರಾಮವನ್ನು ತೊರೆದಿದ್ದರೆ, ಕೆಲವರು ಘಟನೆಯ ಸಮಯದಲ್ಲಿ ಭತ್ತದ ತೋಟದ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.

21 ಪ್ರಾಣಿಗಳ ರಕ್ಷಣೆ: ಘಟನೆಯಲ್ಲಿ ಮೂರು ಜಾನುವಾರುಗಳು ಸಹ ಸಾವನ್ನಪ್ಪಿದ್ದು, 21 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಬೆಟ್ಟದ ತಳದಿಂದ ಇರ್ಶಲವಾಡಿ ತಲುಪಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತದೆ. ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿರುವ ಇರ್ಶಲ್‌ಗಡ ಕೋಟೆಯಿಂದ ಹತ್ತಿರದಲ್ಲಿರುವ ಗ್ರಾಮವು ಪಕ್ಕಾ ರಸ್ತೆಯನ್ನು ಹೊಂದಿಲ್ಲದ ಕಾರಣ, ಮಣ್ಣು ಮೂವರ್ಸ್ ಮತ್ತು ಅಗೆಯುವ ಯಂತ್ರಗಳನ್ನು ಸುಲಭವಾಗಿ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಕೈಯಾರೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬದುಕುಳಿದವರಿಗಾಗಿ 60 ಕಂಟೈನರ್‌ಗಳನ್ನು ಸಾರಿಗೆ ಶಿಬಿರಗಳಾಗಿ ಬಳಸಲು ವಿನಂತಿಸಲಾಗಿದೆ. ಅವುಗಳಲ್ಲಿ 40 ಈಗಾಗಲೇ ಸ್ಥಳವನ್ನು ತಲುಪಿವೆ ಎಂದು ಕೊಂಕಣ ವಿಭಾಗದ ಪ್ರಚಾರ ಉಪನಿರ್ದೇಶಕರ ಕಚೇರಿ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ. ಇದಲ್ಲದೆ, ಸ್ಥಳದಲ್ಲಿ 20 ತಾತ್ಕಾಲಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳನ್ನು ಸಿದ್ಧಪಡಿಸಲಾಗಿದೆ ಎಂದು ಅದು ಹೇಳಿದೆ.

ಸುಮಾರು ಸಾವಿರ ಮಂದಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಸರ್ಕಾರ ಇಲ್ಲಿನ ನಾಗರಿಕರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ನಿರ್ಧರಿಸಿದೆ. ವಿಧಾನ ಪರಿಷತ್ ಉಪಸಭಾಪತಿ ನೀಲಂ ಗೊರ್ಹೆ ಅವರು ಇಂದು ಬೆಳಗ್ಗೆ ಇರ್ಶಲವಾಡಿಗೆ ಭೇಟಿ ನೀಡಿದರು. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಎಲ್ಲೆಂದರಲ್ಲಿ ಮಳೆ, ಕೆಸರಿನಿಂದಾಗಿ ಶೋಧ ಕಾರ್ಯಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ 100 ಮಂದಿ ಎನ್​ಡಿಆರ್​ಎಫ್ ಸಿಬ್ಬಂದಿ, 100 ಮಂದಿ ಜವಾನ್, 80 ಮಂದಿ ಟಿಡಿಆರ್​ಎಫ್​ ಹಾಗೂ 460 ಮಂದಿ ಇತರ ಸಮಾಜ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಕೊಂಕಣ ವಿಭಾಗೀಯ ಆಯುಕ್ತರಾದ ಡಾ. ಮಹೇಂದ್ರ ಕಲ್ಯಾಣ್ಕರ್ ಮಾಹಿತಿ ನೀಡಿದ್ದಾರೆ.

ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ:ಭೂಕುಸಿತ ಹಿನ್ನೆಲೆ ರಾಜ್ಯದ ಎಲ್ಲಾ ಭೂಕುಸಿತ ಪೀಡಿತ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ರಾಜ್ಯ ವಿಧಾನಸಭೆಗೆ ತಿಳಿಸಿದರು. ಇರ್ಶಲವಾಡಿ ಗ್ರಾಮವು ಭೂಕುಸಿತ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿಲ್ಲ ಎಂದು ಅವರು ಹೇಳಿದರು. ಜುಲೈ 22, 2021 ರಂದು, ರಾಯಗಢ ಜಿಲ್ಲೆಯ ಮಹಾದ್ ತೆಹಸಿಲ್‌ನ ತಾಲಿಯೆ ಗ್ರಾಮದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 87 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ:ರಾಯಗಡ ಭೂಕುಸಿತದಲ್ಲಿ ಸಾವಿನ ಸಂಖ್ಯೆ 16ಕ್ಕೇರಿಕೆ; ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ, 119 ಮಂದಿಗಾಗಿ ಶೋಧ ತೀವ್ರ

ABOUT THE AUTHOR

...view details