ಐಜ್ವಾಲ್ (ಮಿಜೋರಾಂ) :ಭಾರತ್ ಜೋಡೋ ಪಾದಯಾತ್ರೆ ಕೆಲ ರಾಜ್ಯಗಳಲ್ಲಿ ಯಶ ತಂದಿದ್ದನ್ನೇ ಮಾನದಂಡ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ರಾಜ್ಯವಾದ ಮಿಜೋರಾಂನಲ್ಲಿ ಸೋಮವಾರ ಪಾದಯಾತ್ರೆ ಹಮ್ಮಿಕೊಂಡರು. ಕಾಂಗ್ರೆಸ್ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಐಜ್ವಾಲ್ನ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು.
ರಾಹುಲ್ ಗಾಂಧಿ ಚನ್ಮಾರಿ ಜಂಕ್ಷನ್ನಿಂದ ಮೆರವಣಿಗೆ ಆರಂಭಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಕಾಂಗ್ರೆಸ್ ನಾಯಕನನ್ನು ಸ್ವಾಗತಿಸಿತು. ದಾರಿಯುದ್ದಕ್ಕೂ ಜನರ ಕೈಕುಲುಕಿ, ಮಾತನಾಡಿಸುತ್ತಾ ಸಾಗಿದರು. ಕೆಲವರು ಸೆಲ್ಫಿ ತೆಗೆದುಕೊಂಡರು. ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಾಯಿತು.
ಭಾರತ್ ಜೋಡೋ ಯಶಸ್ಸಿನ ಮಂತ್ರ:ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಸಮಯದಲ್ಲಿ ಬೃಹತ್ ರೋಡ್ ಶೋ, ಸಾರ್ವಜನಿಕ ಸಭೆಗಳನ್ನು ನಡೆಸಿ ಜನರೊಂದಿಗೆ ಸಂಭಾಷಣೆ ನಡೆಸುತ್ತಾರೆ. ಆದರೆ, ರಾಹುಲ್ ಗಾಂಧಿ ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಈ ಹಿಂದೆ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ ಯಾತ್ರೆ' ನಡೆಸಿದ್ದರು. ಇದಕ್ಕೆ ಸಿಕ್ಕ ಬೆಂಬಲ ಮತ್ತು ಅದು ಸಾಗಿ ಬಂದ ಕೆಲ ರಾಜ್ಯಗಳಲ್ಲಿ ಪಕ್ಷಕ್ಕೆ ಲಾಭ ತಂದುಕೊಟ್ಟಿದೆ ಎಂದು ಪಕ್ಷ ಹೇಳುತ್ತಿದೆ. ಇದನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿರುವ ರಾಹುಲ್, ಮುಂದಿನ ಪಂಚ ಚುನಾವಣಾ ರಾಜ್ಯಗಳಲ್ಲಿ ಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.