ನವದೆಹಲಿ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು, ಸಾರ್ವಜನಿಕರೊಂದಿಗೆ ಬೆರೆಯುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಬೈಕ್ ರಿಪೇರಿ, ರೈಲ್ವೆ ಸ್ಟೇಶನ್ ಬಳಿ ಸೂಟ್ಕೇಸ್ ಹೊರುವುದು, ಗದ್ದೆಯಲ್ಲಿ ನಾಟಿ, ರೈಲಿನಲ್ಲಿ ಜನರೊಂದಿಗೆ ಪ್ರಯಾಣ ಮಾಡಿದ ಬಳಿಕ ಇದೀಗ, ಬಡಿಗ ಕೆಲಸವನ್ನೂ ಮಾಡಿ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿ ಅವರು ಇಲ್ಲಿನ ಕೀರ್ತಿನಗರ ಪೀಠೋಪಕರಣ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕಾಂಗ್ರೆಸ್ ನಾಯಕನಿಗೆ ಕಾರ್ಪೆಂಟರ್‌ಗಳು ವೃತ್ತಿ ಕೌಶಲ್ಯಗಳನ್ನು ವಿವರಿಸುವಾಗ ಮರಗೆಲಸವನ್ನೂ ಮಾಡಿದರು.
ಇದು ಇತ್ತೀಚಿನ ದಿನಗಳಲ್ಲಿ ರಾಹುಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕರೊಂದಿಗೆ ಸೇರಿದ ಮೂರನೇ ಘಟನೆಯಾಗಿದೆ. ಅವರು ಆಗಸ್ಟ್‌ನಲ್ಲಿ ಇಲ್ಲಿನ ಆಜಾದ್‌ಪುರ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರನ್ನು ಭೇಟಿ ಮಾಡಿಧ್ದರು. ಇತ್ತೀಚೆಗೆ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲಿಗಳೊಂದಿಗೆ ಸೂಟ್ಕೇಸ್ ಹೊತ್ತು ಸಾಗಿ, ಬಳಿಕ ಅವರೊಂದಿಗೆ ಸಂವಾದ ನಡೆಸಿ ಅಹವಾಲು ಆಲಿಸಿದ್ದರು.
ಇಂದು ಪೀಠೋಪಕರಣ ತಯಾರಿಸುವ ಅಂಗಡಿಗಳಿಗೆ ಭೇಟಿ ನೀಡಿದ ರಾಹುಲ್, ಬಡಗಿಗಳೊಂದಿಗೆ ಸಂವಾದ ನಡೆಸಿದರು. ಜೊತೆಗೆ ಕೆಲವು ಪೀಠೋಪಕರಣ ವಸ್ತುಗಳನ್ನು ನಿರ್ಮಿಸುವ ಪ್ರಯತ್ನವನ್ನೂ ಮಾಡಿದರು. ಇದನ್ನು ಅವರು ಎಕ್ಸ್ನಲ್ಲಿ ಚಿತ್ರಗಳ ಸಮೇತ (ಹಿಂದಿನ ಟ್ವಿಟರ್) ಹಂಚಿಕೊಂಡಿದ್ದು, ದೆಹಲಿಯ ಕೀರ್ತಿ ನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಭೇಟಿ ನೀಡಿದ್ದೆ. ಅಲ್ಲಿನ ಬಡಗಿ ಕೆಲಸಗಾರ ಸಹೋದರರನ್ನು ಭೇಟಿಯಾದೆ. ಕಠಿಣ ಕೆಲಸವಾಗಿದ್ದರೂ, ಕಟ್ಟಿಗೆಯಲ್ಲಿ ಸೌಂದರ್ಯವನ್ನು ರೂಪಿಸುವ ಅದ್ಭುತ ಕಲಾವಿದರು. ಅವರ ಕೌಶಲ್ಯಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಯತ್ನ ಮಾಡಿದೆ ಎಂದು ರಾಹುಲ್ ಹೇಳಿದ್ದಾರೆ.