ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 'ಸ್ವಜನ ಬಂಡವಾಳಶಾಹಿ'ಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ. ಮೋದಿ ವಿರುದ್ಧ ದನಿ ಎತ್ತುವವರನ್ನು 'ಭಯೋತ್ಪಾದಕರು' ಎಂದು ಬಿಂಬಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ರೈತರ ಪ್ರತಿಭಟನೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿ ದೇಶದ 2 ಕೋಟಿ ಜನರ ಸಹಿಯುಳ್ಳ ಪತ್ರ ಸಲ್ಲಿಸಲು ಹೊರಟಿದ್ದರು. ಆದರೆ ಈ ವೇಳೆ ಕೈ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತ ರಾಷ್ಟ್ರಪತಿ ಭವನಕ್ಕೆ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್ ಮತ್ತು ಅಧೀರ್ ರಂಜನ್ ಚೌಧರಿ ಭೇಟಿ ನೀಡಿದ್ದಾರೆ. ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ರಾಗಾ, ಈ ಕೃಷಿ ಕಾನೂನುಗಳು ರೈತ ವಿರೋಧಿ. ರೈತರೇ ಇದರ ವಿರುದ್ಧವಾಗಿ ನಿಂತಿದ್ದಾರೆ. ಇದರಲ್ಲಿ ನಿಮ್ಮ ಮಧ್ಯಸ್ಥಿಕೆ ಅವಶ್ಯಕ ಎಂದು ರಾಷ್ಟ್ರಪತಿ ಅವರಿಗೆ ನಾನು ಮನವರಿಕೆ ಮಾಡಿಸಿದ್ದೇನೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರೈತರು ಪ್ರತಿಭಟನಾ ಸ್ಥಳಿದಿಂದ ಮನೆಗೆ ಹಿಂದಿರುಗುವುದಿಲ್ಲ. ಸರ್ಕಾರವು ಸಂಸತ್ತಿನ ಜಂಟಿ ಅಧಿವೇಶನ ಕರೆಯಬೇಕು ಮತ್ತು ಈ ಕಾನೂನುಗಳನ್ನು ಹಿಂಪಡೆಯಬೇಕು ಎಂದು ನಾನು ಪಿಎಂ ಮೋದಿಗೆ ಆಗ್ರಹಿಸುತ್ತೇನೆ ಎಂದರು.