ರಾಜಸ್ಥಾನ/ಚಂಡೀಗಢ:ಪ್ರಧಾನಿ ನರೇಂದ್ರ ಮೋದಿ ದುರಾದೃಷ್ಟ, ಅಪಶಕುನ ಎಂದು ಹೀಯಾಳಿಸಿದ್ದ ರಾಹುಲ್ಗಾಂಧಿ, ಇದೀಗ ಪ್ರಧಾನಿಯನ್ನು ಜೇಬುಗಳ್ಳನಿಗೆ ಹೋಲಿಸಿದ್ದಾರೆ. ರಾಜಸ್ಥಾನದ ವಿಧಾನಸಭೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ, ಜೇಬುಗಳ್ಳರು ಹೇಗೆ ಒಂಟಿಯಾಗಿ ಬರುವುದಿಲ್ಲವೋ, ಹಾಗೆಯೇ ಪ್ರಧಾನಿ ಮೋದಿ, ಅಮಿತ್ ಶಾ, ಅದಾನಿ ಒಟ್ಟಾಗಿ ದಾಳಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಮೂವರೂ ಗುಂಪಾಗಿ ಬರುತ್ತಾರೆ. ಆದರಲ್ಲಿ ಒಬ್ಬರು (ಮೋದಿ) ಗಮನವನ್ನು ಬೇರೆಡೆಗೆ ಸೆಳೆದರೆ, ಎರಡನೆಯವರು (ಅದಾನಿ) ಹಿಂದಿನಿಂದ ಬಂದು ಜೇಬು ಕತ್ತರಿಸುತ್ತಾರೆ. ಮೂರನೇಯ ವ್ಯಕ್ತಿ (ಅಮಿತ್ ಶಾ) ಜನರಿಂದ ತಪ್ಪಿಸಿಕೊಳ್ಳಲು ನಿಗಾ ವಹಿಸುತ್ತಿರುತ್ತಾರೆ ಎಂದು ಜೇಬುಗಳ್ಳರ ಕರಾಮತ್ತನ್ನು ಉದಾಹರಿಸುವ ಮೂಲಕ ಟೀಕಿಸಿದ್ದಾರೆ.
ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದೇ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ. ಅವರು ಟಿವಿಯಲ್ಲಿ ಬಂದು ಹಿಂದೂ-ಮುಸ್ಲಿಂ, ನೋಟು ಅಮಾನ್ಯೀಕರಣ ಅಥವಾ ಜಿಎಸ್‌ಟಿ ವಿಷಯದ ಮೂಲಕ ಸಾರ್ವಜನಿಕರನ್ನು ಸೆಳೆಯುತ್ತಾರೆ. ಅಷ್ಟರಲ್ಲಿ ಅದಾನಿ ಹಿಂಬಾಗಿಲಿನಿಂದ ಬಂದು ದೇಶವನ್ನು ಕೊಳ್ಳೆ ಹೊಡೆಯುತ್ತಾರೆ. ಅಮಿತ್ ಶಾ ಇವರಿಗೆ ಭದ್ರತೆ ನೀಡುತ್ತಿರುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ಗೆ 'ರಾಹು'ಲ್ ಅಪಶಕುನ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಶಕುನ, ಜೇಬುಗಳ್ಳ ಎಂದು ಹೀಯಾಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿಯೇ ಕೈ ಪಕ್ಷದ ದೊಡ್ಡ ಅಪಶಕುನ. ಅವರು ಮುಂದಾಳತ್ವ ವಹಿಸಿಕೊಂಡ ಬಳಿಕ ಪಕ್ಷವೇ ಮುಳುಗುತ್ತಿದೆ. ಇದಕ್ಕಿಂತ ದುರಾದೃಷ್ಟ ಮತ್ತೊಂದು ಬೇಕೆ? ಎಂದು ಕಿಚಾಯಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಹರಿಯಾಣದ ಗೃಹ ಸಚಿವ ಅನಿಲ್ ವಿಜ್, ಕಾಂಗ್ರೆಸ್ ನಾಯಕ ತಮ್ಮ ಪಕ್ಷಕ್ಕೇ ದೊಡ್ಡ ಪನೌತಿ (ಅಪಶಕುನ)ಯಾಗಿದ್ದಾರೆ. ಅವರು ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷವು ಪಾತಾಳಕ್ಕೆ ಕುಸಿದಿದೆ. ರಾಹುಲ್ ಹೇಳಿಕೆಗಳು ಕಾಂಗ್ರೆಸ್‌ನ ಹತಾಶೆಯನ್ನು ಸೂಚಿಸುತ್ತವೆ. ಅವರು ಮೋದಿ ಖ್ಯಾತಿಗೆ ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇದೊಂದು ನಾಚಿಕೆಗೇಡಿನ ಮತ್ತು ಅವಮಾನಕರ ಸಂಗತಿ. ಕಾಂಗ್ರೆಸ್ ನಾಯಕ ದೇಶದ ಕ್ಷಮೆಯಾಚಿಸಬೇಕು. ಪ್ರಧಾನಿ ವಿರುದ್ಧ ಟೀಕಿಸುವುದೇ ಕಾಂಗ್ರೆಸ್‌ನ ಕೆಲಸವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್‌ನ ನಾಯಕರಿಗೆ, ದೇಶದ ಶತ್ರುಗಳಿಗೆ ಮತ್ತು ಭಯೋತ್ಪಾದಕರಿಗೆ ಮೋದಿ ದುಃಸ್ವಪ್ನವಾಗಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಇಂತಹ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಪಕ್ಷದ ಹತಾಶೆಯನ್ನೂ ಪ್ರತಿಬಿಂಬಿಸುತ್ತದೆ ಎಂದಿದೆ.
ಇದನ್ನೂ ಓದಿ:'ಭಾರತ ವಿಶ್ವಕಪ್ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ