ಅಮೃತಸರ:ಪಾಕಿಸ್ತಾನದ ಐಎಸ್‌ಐ ಪರವಾಗಿ ಗಡಿಯಾಚೆಗೂ ಬೇಹುಗಾರಿಕೆ ನಡೆಸುತ್ತಿದ್ದ ಕೋಲ್ಕತ್ತಾದ ವ್ಯಕ್ತಿ ಹಾಗೂ ಆತನ ಸಹಚರನನ್ನು ಪಂಜಾಬ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪಾಕಿಸ್ತಾನದ ಐಎಸ್‌ಐ ಮತ್ತು ರಾಜ್ಯದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರಲು ರಹಸ್ಯ ಮಾಹಿತಿಯನ್ನು ಒದಗಿಸುವ ದೇಶದ್ರೋಹಿ ವ್ಯಕ್ತಿಗಳ ನಂಟು ಮುರಿಯಲು ಪಂಜಾಬ್ ಪೊಲೀಸರು ಗಡಿಯಾಚೆಗಿನ ಬೇಹುಗಾರಿಕೆ ಜಾಲವನ್ನು ಭೇದಿಸಿದ್ದಾರೆ ಎಂದು ಪಂಜಾಬ್ ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
ಬಂಧಿತ ಗೂಢಚಾರರನ್ನು ಕೋಲ್ಕತ್ತಾದ ಎಂಟಾಲಿ ನಿವಾಸಿ ಜಾಫರ್ ರಿಯಾಜ್ ಮತ್ತು ಆತನ ಸಹಚರ ಬಿಹಾರದ ಮಧುಬನಿ ನಿವಾಸಿ ಮೊಹಮ್ಮದ್ ಶಂಶಾದ್ ಎಂದು ಗುರುತಿಸಲಾಗಿದೆ. ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ, ಅಮೃತಸರದ ವಿಶೇಷ ಕಾರ್ಯಾಚರಣೆ ತಂಡವು ಜಾಫರ್ ರಿಯಾಜ್ ಮತ್ತು ಅವರ ಸಹಚರ ಮೊಹಮ್ಮದ್ ಶಂಶಾದ್ ಅವರನ್ನು ಬಂಧಿಸಿದೆ. ಆರೋಪಿಗಳು ಅಮೃತಸರದ ಮಿರಾಕೋಟ್ ಚೌಕ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಮೇಲೆ ಅಧಿಕೃತ ರಹಸ್ಯ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರು ನೀಡಿರುವ ಮಾಹಿತಿಗಳನ್ನು ಕಲೆ ಹಾಕಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಂಜಾಬ್ ಪೊಲೀಸ್ ಇಲಾಖೆ ತಿಳಿಸಿದೆ.
ಓದಿ:ಅಮೆರಿಕ ಗುಪ್ತಚರ ಸಂಸ್ಥೆ ಪ್ರವೇಶಿಸಲು ಯತ್ನಿಸಿದ ಪಾಕ್ ಐಎಸ್‌ಐ ಗೂಢಾಚಾರಿಗಳ ಬಂಧನ
2005ರಲ್ಲಿ ಲಾಹೋರ್‌ನ ಮಾಡೆಲ್ ಟೌನ್‌ನ ನಿವಾಸಿಯಾಗಿರುವ ಪಾಕಿಸ್ತಾನದ ಪ್ರಜೆ ರಾಬಿಯಾಳನ್ನು ಜಾಫರ್ ವಿವಾಹವಾಗಿರುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಆರಂಭದಲ್ಲಿ, ರಾಬಿಯಾ ಕೋಲ್ಕತ್ತಾದಲ್ಲಿ ಜಾಫರ್ ಜೊತೆ ವಾಸಿಸುತ್ತಿದ್ದಳು. ಆದ್ರೆ 2012ರಲ್ಲಿ ಜಾಫರ್ಗೆ ಅಪಘಾತ ಸಂಭವಿಸಿತ್ತು. ಬಳಿಕ ಆತನ ಆರ್ಥಿಕ ಸ್ಥಿತಿಯು ಹದಗೆಟ್ಟಿತು. ಜಾಫರ್ ಅತ್ತೆಯ ಒತ್ತಾಯದ ಮೇರೆಗೆ ಆತ ಲಾಹೋರ್‌ಗೆ ಸ್ಥಳಾಂತರಗೊಂಡನು. ಜಾಫರ್ ತನ್ನ ಚಿಕಿತ್ಸೆಯ ನೆಪದಲ್ಲಿ ಆಗಾಗ್ಗೆ ಭಾರತಕ್ಕೆ ಪ್ರಯಾಣಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಜಾಫರ್ ಲಾಹೋರ್‌ನಲ್ಲಿರುವ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡ ಪಾಕಿಸ್ತಾನದ ಗುಪ್ತಚರ ಅಧಿಕಾರಿ (ಪಿಐಒ) ಅವೈಸ್ ಅವರೊಂದಿಗೆ ಸಂಪರ್ಕದಲ್ಲಿದ್ದನು. ಆರೋಪಿಯನ್ನು ಐಎಸ್‌ಐಗಾಗಿ ಕೆಲಸ ಮಾಡುವಂತೆ ಮನವೊಲಿಸಿದ ಪರಿಣಾಮ ಆತ ಭಾರತಕ್ಕೆ ಭೇಟಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.
ಆರೋಪಿಯು ಭಾರತೀಯ ಸೇನೆಯ ಕಟ್ಟಡಗಳು, ವಾಹನಗಳು ಸೇರಿದಂತೆ ಇತ್ಯಾದಿಗಳ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದ ಕ್ಲಿಪ್ಗಳನ್ನು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ಅದನ್ನು ಹಂಚಿಕೊಂಡಿದ್ದನು. ಮೊಬೈಲ್ ಫೋನ್‌ನ ಪ್ರಾಥಮಿಕ ತಪಾಸಣೆಯ ವೇಳೆ ಆ ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಫರನು ಮೊಹಮ್ಮದ್ ಶಂಶಾದ್ನನ್ನು ಅವೈಸ್‌ಗೆ ಪರಿಚಯಿಸಿದ್ದಾನೆ. ಶಂಶಾದ್ ಅಮೃತಸರ ರೈಲು ನಿಲ್ದಾಣದ ಎದುರು ನಿಂಬೆ ಹಣ್ಣಿನ ಬಂಡಿ ನಡೆಸುತ್ತಿದ್ದನು. ಆತ ಅಮೃತಸರದ ವಾಯುಪಡೆಯ ನಿಲ್ದಾಣ ಮತ್ತು ಕಂಟೋನ್ಮೆಂಟ್ ಪ್ರದೇಶದ ಛಾಯಾಚಿತ್ರಗಳನ್ನು ಜಾಫರ್ಗೆ ಕಳುಹಿಸಿದ್ದಾನೆ. ಜಾಫರ್ ಆ ಛಾಯಾಚಿತ್ರಗಳನ್ನು ಅವೈಸ್‌ಗೆ ಕಳುಹಿಸಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯಲಾಗುವುದೆಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.