ಚಂಡೀಗಢ:ಪಂಜಾಬ್ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಲೂಧಿಯಾನದಲ್ಲಿ ಬಹಿರಂಗ ಚರ್ಚೆಯನ್ನು ಆಯೋಜಿಸಿದ್ದರು. ಈ ಚರ್ಚೆಯಲ್ಲಿ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ವಿಪಕ್ಷದ ನಾಯಕರಿಗೆ ಆಹ್ವಾನಿಸಲಾಗಿತ್ತು. ಆದರೆ ಇಂದಿನ ಚರ್ಚೆಗೆ ವಿಪಕ್ಷ ನಾಯಕರು ಯಾರೊಬ್ಬರು ಭಾಗಿಯಾಗಲಿಲ್ಲ. ವಿಪಕ್ಷ ನಾಯಕರ ಗೈರಿನ ನಡುವೆ ಮುಖ್ಯಮಂತ್ರಿ ಭಗವಂತ ಮಾನ್ ಅವರು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದು. ಹಿಂದಿನ ಸರ್ಕಾರ ಮಾಡಿರುವ ಸಾಲದ ಕುರಿತು ಅಂಕಿ - ಅಂಶಗಳ ಸಮೇತವಾಗಿ ಜನರ ಮುಂದಿಟ್ಟರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜ್ಯದ ಸಾಲ ದ್ವಿಗುಣ:ಚರ್ಚೆಯಲ್ಲಿ ರಾಜ್ಯದ ಸಾಲದ ಕುರಿತು ಮಾತನಾಡಿದ ಅವರು,2012ರಿಂದ ಪಂಜಾಬ್ ಖಜಾನೆಯ ಮೇಲೆ ಸಾಲದ ಹೊರೆ ಬೀಳಲು ಪ್ರಾರಂಭಿಸಿತು ಎಂದು ಹೇಳಿದರು. 2012ರಲ್ಲಿ 83,099 ಸಾವಿರ ಕೋಟಿ ರೂ.ಗಳಷ್ಟಿದ್ದ ರಾಜಯ್ದ ಸಾಲ 2017ರಲ್ಲಿ ಏಕಾಏಕಿ 1 ಲಕ್ಷದ 82 ಸಾವಿರ ಕೋಟಿಗೆ ಏರಿಕೆಯಾಗಿದೆ. ಇದಾದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರ ಬಂದಿದ್ದು ಇನ್ನೂ 1 ಲಕ್ಷ ಕೋಟಿ ಹೆಚ್ಚಾಳವಾಯಿತು. 10 ವರ್ಷಗಳಲ್ಲಿ ಪಂಜಾಬ್ 2 ಲಕ್ಷ ಕೋಟಿ ಸಾಲ ಮಾಡಿದೆ. ಸಾಲ ಮಾಡಿದರೂ ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲಾಗಿಲ್ಲ, ಉದ್ಯೋಗವನ್ನೂ ನೀಡಲಾಗಿಲ್ಲ. ಹಾಗಾದರೆ 2 ಲಕ್ಷ ಕೋಟಿ ಸಾಲ ಹೇಗಾಯಿತು ಮತ್ತು ಆ ಹಣ ಎಲ್ಲಿಗೆ ಹೋಯಿತು, ಎಲ್ಲಿ ಹೂಡಿಕೆ ಮಾಡಿದರು ಎಂದು ಪ್ರಶ್ನಿಸಿದರು.
ವಿದ್ಯುತ್ ಸಾಲವನ್ನು ತೀರುಸುತ್ತೇವೆ: ಹಿಂದಿನ ಸರ್ಕಾರಗಳ ಅವಧಿಯಲ್ಲಿ ವಿದ್ಯುತ್ ಮಂಡಳಿ ಮೇಲೆ ಮಾಡಿರುವ ಸಾಲ 1009 ಕೋಟಿ ಇದೆ. ಅದನ್ನೂ ನಮ್ಮ ಆಪ್ ಸರ್ಕಾರ ತೀರಿಸುತ್ತದೆ. ಜತೆಗೆ ನಾವು ನುಡಿದಂತೆ ಯಾವುದೇ ನಯಾ ಪೈಸೆ ಪಡೆಯದೇ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ. ಚುನಾವಣೆಯ ಸಮಯದಲ್ಲಿ ನೇಮಕಾತಿ ಪ್ರಕಟಣೆಗಳನ್ನು ಮಾಡಲಾಗಿತ್ತು ಆದರೆ, ಅವು ಪೂರ್ಣಗೊಂಡಿಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿತ್ತು. ಇದೀಗ ನಮ್ಮ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 37,946 ಉದ್ಯೋಗಗಳನ್ನು ನೀಡಿದ್ದೇವೆ. ಇದೀಗ ಪಂಜಾಬ್‌ನಲ್ಲಿ ಟಾಟಾ ಸ್ಟೀಲ್‌ನ ಎರಡನೇ ಅತಿ ದೊಡ್ಡ ಸ್ಥಾವರ ಸ್ಥಾಪನೆಯಾಗಲಿದ್ದು, ಅಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಹೇಳಿದ ಅವರು, ಪಂಜಾಬ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಯ ಕುರಿತು ಮಾತನಾಡಿದರು.