ಕರ್ನಾಟಕ

karnataka

ETV Bharat / bharat

ವಿದ್ಯುತ್, ನೀರು ಬಾಕಿ ಸಂಪೂರ್ಣ ಮನ್ನಾ ಮಾಡಿ ನಾನೇ 'ಆಮ್ ಆದ್ಮಿ' ಎಂದ ಚನ್ನಿ: ಅಮರೀಂದರ್ ಸಿಂಗ್‌ ಆಪ್ತ ಅಧಿಕಾರಿಗಳಿಗೂ ಗೇಟ್‌ಪಾಸ್‌! - electricity and water bills

ಪಂಜಾಬ್​ನಲ್ಲಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ 58 ವರ್ಷದ ಚರಣ್​ಜಿತ್ ಸಿಂಗ್​ ಚನ್ನಿ, ಮೊದಲ ದಿನವೇ ಮಹತ್ವದ ಘೋಷಣೆಗಳನ್ನು ಮಾಡಿದ್ದು, ಆಡಳಿತ ವಿಭಾಗದಲ್ಲಿ ಕೆಲವೊಂದು ಬದಲಾವಣೆ ತಂದಿದ್ದಾರೆ.

Punjab CM Channi
Punjab CM Channi

By

Published : Sep 20, 2021, 5:04 PM IST

ಚಂಡೀಗಡ(ಪಂಜಾಬ್​):ಕ್ಯಾಪ್ಟನ್​ ಅಮರೀಂದರ್ ಸಿಂಗ್​ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದ ಚರಣ್​​ಜಿತ್​ ಸಿಂಗ್​​ ಚನ್ನಿ ಇಂದು ನೂತನ ಸಿಎಂ ಆಗಿ ಪದಗ್ರಹಣ ಮಾಡಿದರು. ಅಧಿಕಾರ ಸ್ವೀಕಾರ ಮಾಡಿರುವ ಮೊದಲ ದಿನವೇ ಅವರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ, ಬಡವರ ವಿದ್ಯುತ್​​ ಹಾಗೂ ನೀರಿನ ಬಿಲ್​ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಇದರ ಜೊತೆಗೆ ಪಂಜಾಬ್​ನಲ್ಲಿ ರೈತರಿಗೆ ನೀಡಲಾಗುತ್ತಿರುವ ವಿದ್ಯುತ್​​ ಉಚಿತವಾಗಿ ಮುಂದುವರೆಯಲಿದೆ ಎಂದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಆಡಳಿತಯಂತ್ರಕ್ಕೆ ಸರ್ಜರಿ:

ಮುಖ್ಯಮಂತ್ರಿಯಾಗಿ ಮೊದಲ ದಿನವೇ ಆಡಳಿತದಲ್ಲಿ ಮಹತ್ವದ ಬದಲಾವಣೆ ಮಾಡಿರುವ ನೂತನ ಸಿಎಂ, ಅಧಿಕಾರಿಗಳಿಗೆ ವರ್ಗಾವಣೆಯ ಬಿಸಿ ಮುಟ್ಟಿಸಿದ್ದಾರೆ. ಹಿರಿಯ ಐಎಎಸ್​​ ಅಧಿಕಾರಿ ಹುಸೇನ್​ ಲಾಲ್​​ ಇದೀಗ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕ್ಯಾ. ಅಮರೀಂದರ್ ಸಿಂಗ್​​ ಸಿಎಂ ಆಗಿದ್ದ ವೇಳೆ ಪ್ರಧಾನ ಕಾರ್ಯದರ್ಶಿಯಾಗಿದ್ದ ತೇಜ್​ವೀರ್​ ಸಿಂಗ್​ ಅವರಿಗೆ ಬೇರೆ ಹುದ್ದೆ ನೀಡಲಾಗಿದೆ.

ಪಂಜಾಬ್‌ ಕಾಂಗ್ರೆಸ್‌ ಉಸ್ತುವಾರಿ ಹರೀಶ್ ರಾವತ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿಧು ಜೊತೆ ನೂತನ ಸಿಎಂ ಚರಣ್​ಜಿತ್ ಸಿಂಗ್​ ಚನ್ನಿ​

ಇದನ್ನೂ ಓದಿ:IPLಗೆ ಗ್ಲ್ಯಾಮರ್​ ಸ್ಪರ್ಶ: ಬುಮ್ರಾ ಪತ್ನಿ ಸೇರಿ ಇವರೆಲ್ಲಾ ಹೊಡಿಬಡಿ ಆಟದ ಸ್ಟಾರ್‌ ಆ್ಯಂಕರ್ಸ್‌

ರಾಹುಲ್​ ತಿವಾರಿ ಅವರನ್ನು ಸರ್ಕಾರದ ವಿಶೇಷ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಗುರುಕೀರತ್​ ಕಿರಪಾಲ್​ ಸಿಂಗ್​​ ಅವರನ್ನು ತೆಗೆದುಹಾಕಲಾಗಿದೆ. ಕ್ಯಾಪ್ಟನ್​ ಅಮರೀಂದರ್​ ಸಿಂಗ್​​​​ ಅವರೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದ ಅಧಿಕಾರಿಗಳನ್ನು ಬೇರೆ ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಿರುವುದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.

'ನಾನು 'ಆಮ್​​ ಆದ್ಮಿ' ಎಂದ ಪಂಜಾಬ್ ಸಿಎಂ

ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಹೆಚ್ಚು ಜನಪ್ರೀಯತೆ ಪಡೆಯಲು ಶುರುವಾಗಿದ್ದು, ಚರಣ್​ ಜಿತ್​ ಸಿಂಗ್​​ 'ನಾನು ಆಮ್​ ಆದ್ಮಿ' ಎಂದು ಹೇಳುವ ಮೂಲಕ ಆಮ್‌ ಆದ್ಮಿ ಪಕ್ಷಕ್ಕೆ ಟಾಂಗ್​ ನೀಡಿದ್ದಾರೆ. ಜೊತೆಗೆ ಸಂಪೂರ್ಣ ಪಂಜಾಬ್​ ಪ್ರವಾಸ ಮಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಮತ್ತೊಂದು ಅವಧಿಗೆ ಅಧಿಕಾರಕ್ಕೆ ತರುವ ಘೋಷಣೆ ಮಾಡಿದ್ದಾರೆ. ಪಂಜಾಬ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿದ್ಯುತ್​​ ಹಾಗೂ ನೀರಿನ ಬಿಲ್​​ ಮನ್ನಾ ಮಾಡುವುದಾಗಿ ಈಗಾಗಲೇ ಕೇಜ್ರಿವಾಲ್​ ಘೋಷಣೆ ಮಾಡಿದ್ದಾರೆ.

ABOUT THE AUTHOR

...view details