ಪುಣೆ, ಮಹಾರಾಷ್ಟ್ರ:ನಗರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ಬೆಳಗ್ಗೆ ಪೂರ್ಣನಗರ ಚಿಂಚ್‌ವಾಡ್‌ನಲ್ಲಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ.
ಇನ್ನು ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಬಳಿಕ ಬೆಂಕಿಯನ್ನು ನಿಯಂತ್ರಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬರಬೇಕಿದೆ.
ಓದಿ:ಹಾವೇರಿ: ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ... ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ
ಹಾವೇರಿಯ ಬೆಂಕಿ ಅವಘಡದಲ್ಲಿ ನಾಲ್ವರು ಸಾವು!:ನಗರದ ಸಮೀಪದ ಆಲದಕಟ್ಟಿ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿತ್ತು. ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನ 25 ವರ್ಷದ ದ್ಯಾಮಪ್ಪ ಓಲೇಕಾರ, 28 ವರ್ಷದ ರಮೇಶ್ ಬಾರ್ಕಿ ಮತ್ತು 22 ವರ್ಷದ ಶಿವಲಿಂಗ ಅಕ್ಕಿ ಎಂದು ಗುರುತಿಸಲಾಗಿದೆ. ಮೃತರು ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಮೃತದೇಹಗಳು ಪತ್ತೆಯಾಗುತ್ತಿದ್ದಂತೆ ಮೃತರ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ.
ಘಟನೆಗೆ ಕಾರಣ:ಗೋದಾಮಿನ ಗೇಟ್ ಅನ್ನು ವೆಲ್ಡಿಂಗ್ ಮಾಡಿಸಲು ಮುಂದಾಗಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ವೆಲ್ಡಿಂಗ್ ಮಾಡುತ್ತಿದ್ದಾಗ ಕಿಡಿ ತಾಗಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದರು. ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಕಾರ್ಯಾಚರಣೆ ಸಂಜೆ 4 ಗಂಟೆವರೆಗೆ ನಡೆಯಿತು. ಸುಮಾರು 30ಕ್ಕೂ ಅಧಿಕ ಅಗ್ನಿಶಾಮಕ ದಳದ ವಾಹನಗಳ ನೀರು ಬಳಸಿದರೂ ಬೆಂಕಿ ತಹಬದಿಗೆ ಬಂದಿರಲಿಲ್ಲ. ಹರಸಾಹಸದ ಬಳಿಕ ತಹಬದಿಗೆ ಬಂದಿತ್ತು. ಬಳಿಕ ಒಳಹೊಕ್ಕು ನೋಡಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಕಂಡು ಬಂದಿವೆ. ಸುದ್ದಿ ಗೊತ್ತಾಗುತ್ತಿದೆಯಂತೆ ಜಿಲ್ಲಾಧಿಕಾರಿ ರಘುನಂದಮೂರ್ತಿ, ಎಸ್ಪಿ ಶಿವಕುಮಾರ್ ಗುಣಾರೆ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.