ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ಮತ್ತು ಶವ ಸಾಗಿಸುವ ವಾಹನ ಚಾಲಕರ ಅಲಭ್ಯತೆಯ ಕಾರಣ ಕುಟುಂಬವೊಂದು 95 ವರ್ಷದ ವೃದ್ಧೆಯ ಮೃತದೇಹವನ್ನು ಆಟೋ ರಿಕ್ಷಾದಲ್ಲಿಯೇ ಶವಾಗಾರಕ್ಕೆ ತೆಗೆದುಕೊಂಡು ಹೋಗಿದೆ. ಸೋಮವಾರ ರಾತ್ರಿ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪುಣೆಯ ನವ ಮೋದಿಖಾನಾ ಕ್ಯಾಂಪ್ ಪ್ರದೇಶದಲ್ಲಿ ರಾತ್ರಿ ಅಜ್ಜಿ ತಮ್ಮ ಮನೆಯಲ್ಲಿ ನಿಧನರಾಗಿದ್ದರು. ಮೃತದೇಹವನ್ನು ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಶವಾಗಾರಕ್ಕೆ ಸಾಗಿಸಲು ಶವ ವಾಹನವನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ, ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಶವ ವಾಹನ ಚಾಲಕರು ಅಥವಾ ಆಂಬ್ಯುಲೆನ್ಸ್ ಚಾಲಕರು ಲಭ್ಯ ಇರಲಿಲ್ಲ. ಸಾಕಷ್ಟು ಪ್ರಯತ್ನದ ಹೊರತಾಗಿಯೂ ಕುಟುಂಬ ಸದಸ್ಯರಿಗೆ ಶವ ವಾಹನದ ಮುಖ್ಯಸ್ಥರಾಗಲಿ ಅಥವಾ ಅವರ ಸಹಾಯಕರನ್ನಾಗಲಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಸಂಬಂಧಿಕರೇ ಮೃತದೇಹವನ್ನು ಆಟೋ ರಿಕ್ಷಾದಲ್ಲಿ ಶವಾಗಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆ ತಲುಪಿದಾಗ ಶವಾಗಾರ ಮುಚ್ಚಿರುವುದು ಕಂಡುಬಂತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ವೇಳೆ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯದಲ್ಲಿದ್ದ ದಾದಿಯರ ಸಹಾಯ ಕೋರಿದ್ದಾರೆ. ಆದರೆ, ಅವರ್ಯಾರೂ ನೆರವಿಗೆ ಬಂದಿಲ್ಲ. ಸಹಾಯ ಕೋರಿ ವೈದ್ಯಾಧಿಕಾರಿಯೊಬ್ಬರ ನಿವಾಸಕ್ಕೂ ಕುಟುಂಬಸ್ಥರು ತೆರಳಿದ್ದರು. ಅವರ ನಿವಾಸ ಕೂಡ ಬೀಗ ಹಾಕಿತ್ತು ಎಂದು ದೂರಲಾಗಿದೆ.