ಭರತ್ಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಭುಗಿಲೆದ್ದ ಮೀಸಲಾತಿ ಪ್ರತಿಭಟನೆಯ ಗಂಭೀರ ಪರಿಸ್ಥಿತಿಯನ್ನು ಊಹಿಸಿರುವ ಭರತ್ಪುರ ಜಿಲ್ಲಾಡಳಿತ ಜಿಲ್ಲೆಯ ನಾಡಬೈ, ವೈರ್ ಹಾಗೂ ಭೂಸಾವರ್ನಲ್ಲಿ ಇಂಟರ್ನೆಟ್ ಸೇವೆಯನ್ನು ಇಂದು ಮಧ್ಯರಾತ್ರಿ 12 ರವರೆಗೆ ಸ್ಥಗಿತಗೊಳಿಸಿದೆ. ನಿನ್ನೆಯಿಂದ ಮಾಲಿ, ಕುಶ್ವಾಹ, ಶಾಕ್ಯ ಮತ್ತು ಮೌರ್ಯ ಸಮುದಾಯದವರು ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ 12 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ಆಗ್ರಾ-ಬಿಕಾನೇರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಮಿತಿಯ ಸಂಯೋಜಕನ ಕಸ್ಟಡಿಗೆ ಪಡೆದ ಪೊಲೀಸರು:ಮೀಸಲಾತಿ ಸೇರಿದಂತೆ ಇತರ ಬೇಡಿಕೆಗಳ ಕುರಿತು ಆರಕ್ಷಣ ಆಂದೋಲನ ಸಂಘರ್ಷ ಸಮಿತಿಯು ಹೆದ್ದಾರಿಗೆ ಇಳಿದು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಮುನ್ನೆಚ್ಚರಿಕೆಯಾಗಿ ಪೊಲೀಸರು ಮೊದಲೇ ಸಮಿತಿಯ ಸಂಚಾಲಕ ಮುರಾರಿಲಾಲ್ ಸೈನಿ ಸೇರಿದಂತೆ 26 ಮಂದಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರು. ಇದು ಜನರನ್ನು ಇನ್ನಷ್ಟು ಕೆರಳಿಸಿತ್ತು. ಸುಮಾರು 25 ನಿಮಿಷಗಳ ಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಇದರ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ.
ಇದೀಗ ತಮ್ಮ ಮೀಸಲಾತಿ ಬೇಡಿಕೆ ಸೇರಿದಂತೆ ವಶಕ್ಕೆ ಪಡೆದಿರುವ ಸಂಚಾಲಕ ಮುರಾರಿಲಾಲ್ ಸೈನಿ ಅವರನ್ನು ಬಿಡುಗಡೆ ಮಾಡಬೇಕು ಎಂದೂ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದಲೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಮಾಜದ ಪ್ರತಿನಿಧಿಗಳನ್ನು ಮಾತನಾಡಿಸಿ, ಅವರ ಮನವೊಲಿಸಲು ಆಡಳಿತಾಧಿಕಾರಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದೇ ವೇಳೆ, ಜಿಲ್ಲೆಯ ಪರಿಸರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯರಾತ್ರಿ 12 ಗಂಟೆಯವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಅಲೋಕ್ ರಂಜನ್ ಆದೇಶ ಹೊರಡಿಸಿದ್ದಾರೆ.
ನಿನ್ನೆ ಬೆಳಗ್ಗೆಯಿಂದಲೇ ಪ್ರತಿಭಟನೆ ಪ್ರಾರಂಭಗೊಂಡಿದ್ದು, ಸಮುದಾಯದ ಪ್ರತಿಭಟನಾಕಾರರು ರಾತ್ರಿ ಹೊತ್ತಿಗೆ ಹೆದ್ದಾರಿಯನ್ನು ಆಕ್ರಮಿಸಿಕೊಂಡ ಪರಿಣಾಮ ಮುಷ್ಕರದ ಕಾವು ಹೆಚ್ಚಾಗಿತ್ತು. ಮಧ್ಯಾಹ್ನ ಹೊತ್ತಿಗೆ ಪ್ರತಿಭಟನಾಕಾರರು ರಸ್ತೆ ತಡೆಯಲು ಪ್ರಯತ್ನಿಸಿದ್ದು, ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿ, ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಪೋಲಿಸರು ಹಾಗೂ ಪ್ರತಿಭಟನಾಕಾರರು ಮುಖಾಮುಖಿಯಾಗಿದ್ದ ವೇಳೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಾಗ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ.
ಅರೋಂಡಾದಲ್ಲಿ ಚಳವಳಿ:ಅರೋಂಡಾ ಮಾಲಿ, ಕುಶ್ವಾಹ, ಶಾಕ್ಯ ಮತ್ತು ಮೌರ್ಯ ಸಮಾಜದ ಭದ್ರಕೋಟೆ. ಇಲ್ಲಿ ನಾಡಬಾಯಿ, ವೈರ್ ಮತ್ತು ದೌಸಾದ ಮಾಹ್ವಾ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಭರತ್ಪುರದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜಾತಿಗಳ ಪ್ರಾಬಲ್ಯ ಹೆಚ್ಚಿದೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜಾತಿಗಳ ದೊಡ್ಡ ವೋಟ್ ಬ್ಯಾಂಕ್ ಇದೆ. ಅರೋಂಡಾದಲ್ಲಿ ಈ ಮೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಕಾರಣಕ್ಕಾಗಿಯೇ ಅವರು ಈ ಸ್ಥಳವನ್ನು ಪ್ರತಿಭಟನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ನಾಲ್ಕೂ ಸಮುದಾಯದ ಜನರು ಅರೋಂಡಾ ಗ್ರಾಮದ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಕುಳಿತು, 12 ಪ್ರತಿಶತ ಮೀಸಲಾತಿಗೆ ಒತ್ತಾಯಿಸಿದ್ದಾರೆ. ಈ ಹಿಂದೆ, ಜೂನ್ 12, 2022 ರಂದು, ಈ ಸಮುದಾಯದವರು ಒಂಬತ್ತು ದಿನಗಳ ಕಾಲ ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ್ದರು. ಸಚಿವ ವಿಶ್ವೇಂದ್ರ ಸಿಂಗ್ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದಿದ್ದರು.