ತಿರುವನಂತಪುರಂ(ಕೇರಳ):ಕೇರಳ ಹೈಕೋರ್ಟ್ ವಿಝಿಂಜಂ ಬಂದರು ಯೋಜನೆಯನ್ನು ಪುನಾರಂಭಿಸುವಂತೆ ಸೂಚಿಸಿತ್ತು. ಇದನ್ನು ವಿರೋಧಿಸಿ ಪ್ರತಿಭಟನಾಕಾರರ ಗುಂಪೊಂದು ಪೊಲೀಸ್ ವಾಹನಗಳನ್ನು ಉರುಳಿಸಿ ಇಬ್ಬರು ಪೊಲೀಸರನ್ನು ಗಾಯಗೊಳಿಸಿದ್ದರು. ಘರ್ಷಣೆಯ ನಂತರ ಐವರನ್ನು ಪೊಲೀಸರು ಬಂಧಿಸಿದ್ದರು.
ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾನುವಾರ ಪ್ರತಿಭಟನಾಕಾರರು ವಿಜಿಂಜಂ ಪೊಲೀಸ್ ಠಾಣೆಯನ್ನು ಸುತ್ತುವರೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ದೊಡ್ಡ ಮಟ್ಟದ ಗಲಭೆ ನಡೆದಿತ್ತು. ಪ್ರತಿಭಟನೆ ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೂ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದರು.
ಇನ್ನು ಉದ್ವಿಗ್ನ ಪರಿಸ್ಥಿತಿಗೆ ಪ್ರತಿಭಟನೆ ಮುಟ್ಟಿದ್ದರಿಂದ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ಗಳ ಪ್ರಯೋಗ ಮಾಡಿದ್ದರು. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಿಂದ ಹಲವಾರು ಜನರು ಗಾಯಗೊಂಡಿದ್ದರು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ತಿರುವನಂತಪುರಂನ ಲ್ಯಾಟಿನ್ ಆರ್ಚ್‌ಡ್ ಯಾಸಿಸ್‌ನ ಆರ್ಚ್‌ಬಿಷಪ್ ಥಾಮಸ್ ಜೆ. ನೆಟ್ಟೊ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅವರನ್ನು ಮೊದಲ ಆರೋಪಿ ಎಂದು ಹೆಸರಿಸಿ, ಸಹಾಯಕ ಬಿಷಪ್, ಕ್ರಿಸ್ತದಾಸ್ ಮತ್ತು ವಿಕಾರ್ ಜನರಲ್ ಯುಜಿನ್ ಪೆರೇರಿಯಾ ಸೇರಿದಂತೆ ಐವತ್ತು ಪಾದ್ರಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.
ವಿಝಿಂಜಂ ಪೊಲೀಸ್ ಠಾಣೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಿರುವನಂತಪುರಂ ನಗರ ಪೊಲೀಸರು 200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
3000 ಜನರ ವಿರುದ್ಧ ಪ್ರಕರಣ ದಾಖಲು:ಇದೇ ವೇಳೆ, ಭಾನುವಾರ ರಾತ್ರಿ ನಡೆದ ಪ್ರತಿಭಟನೆ ವೇಳೆ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ 3,000 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಕ್ಕಾಗಿ 3,000 ಗುರುತಿಸಬಹುದಾದ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ 36ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ :ಬಂದರು ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಪ್ರತಿಭಟನೆ