ತಿರುವನಂತಪುರಂ (ಕೇರಳ): ರಾಜ್ಯದ ಎಲ್ಲ ವೈದ್ಯಕೀಯ ವೃತ್ತಿಪರರನ್ನು ಎಲ್ಲಾ ರೀತಿಯ ದೈಹಿಕ ಮತ್ತು ಮೌಖಿಕ ದಾಳಿಗಳಿಂದ ರಕ್ಷಿಸುವ ದೃಷ್ಟಿಯಿಂದ ಕೇರಳ ಸಚಿವ ಸಂಪುಟವು ಆಸ್ಪತ್ರೆ ಸಂರಕ್ಷಣಾ ಕಾಯಿದೆ (Kerala Comprehensive Hospital Protection Act) ಸುಗ್ರೀವಾಜ್ಞೆಗೆ ಇಂದು (ಬುಧವಾರ) ಅನುಮೋದನೆ ನೀಡಿದೆ. ಪ್ರತಿವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿತವಾಗಿರುವ ಸುಗ್ರೀವಾಜ್ಞೆಯನ್ನು ಒಪ್ಪಿಗೆಗಾಗಿ ಶೀಘ್ರದಲ್ಲೇ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕಳುಹಿಸುವ ಸಾಧ್ಯತೆಯಿದೆ.
ವಂದನಾ ದಾಸ್ ಅವರು ಮೃತಪಟ್ಟು ಒಂದು ವಾರದ ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇರಳ ಕ್ಯಾಬಿನೆಟ್ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಗಳಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾಪಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ. ಕೇರಳ ಹೆಲ್ತ್‌ಕೇರ್ ಸೇವಾ ವ್ಯಕ್ತಿಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳು, (ಹಿಂಸಾಚಾರ ತಡೆಗಟ್ಟುವಿಕೆ ಮತ್ತು ಆಸ್ತಿಗೆ ಹಾನಿ) ಕಾಯಿದೆ 2012 ಅನ್ನು ತಿದ್ದುಪಡಿ ಮಾಡಲು ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಲಾಗಿದೆ.
ಮೇ 10 ರಂದು ಕೊಟ್ಟಾರಕ್ಕರದ ತಾಲೂಕು ಆಸ್ಪತ್ರೆಯ ಹೌಸ್ ಸರ್ಜನ್ ಆಗಿದ್ದ ಡಾ. ವಂದನಾ ದಾಸ್ ಅವರನ್ನು ಚಿಕಿತ್ಸೆಗೆ ಬಂದಿದ್ದ ರೋಗಿಯೊಬ್ಬ ಇರಿದು ಕೊಂದು ಹಾಕಿದ್ದ. ಈ ಘಟನೆಯ ನಂತರ ಕೇರಳದಲ್ಲಿ ಆರೋಗ್ಯ ಕಾರ್ಯಕರ್ತರು ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದರು. ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಈ ಕೂಡಲೇ ತಡೆಗಟ್ಟುವಂತೆ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದರು. ಭಾರತೀಯ ವೈದ್ಯಕೀಯ ಸಂಘ ಮತ್ತು ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ) ನಡೆಸಿದ ಮುಷ್ಕರದ ನಂತರ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ತರಲು ನಿರ್ಧರಿಸಿತ್ತು.