ನವದೆಹಲಿ:2024 ರೊಳಗೆ ಬಹುತೇಕ ಎಲ್ಲ ಭಾರತೀಯರೂ ಕೋವಿಡ್ ಲಸಿಕೆ ಪಡೆಯಲಿದ್ದಾರೆ ಎಂದು ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಹೇಳಿದ್ದಾರೆ.
ಮಾಧ್ಯಮ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಆಕ್ಸ್ಫರ್ಡ್ ಆಸ್ಟ್ರಾಝೆನೆಕಾ ಕೋವಿಡ್-19 ಲಸಿಕೆಯು ಫೆಬ್ರವರಿ 2021 ರೊಳಗೆ ಆರೋಗ್ಯ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ ಲಭ್ಯವಾಗಲಿದೆ. ಹಾಗೆಯೇ 2021ರ ಏಪ್ರಿಲ್ ಹೊತ್ತಿಗೆ ದೇಶದ ಇತರ ಎಲ್ಲರಿಗೂ ಈ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಪೂನಾವಾಲಾ ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾನ್ಯ ಜನತೆಗೆ ನೀಡಲಾಗುವ ಕೋವಿಡ್ ಲಸಿಕೆಯ ಪ್ರತಿ ಡೋಸ್ಗೆ ಗರಿಷ್ಠ 1000 ರೂಪಾಯಿ ದರ ನಿಗದಿಯಾಗಬಹುದು. ಟ್ರಯಲ್ಸ್ನ ಅಂತಿಮ ಪರಿಣಾಮಗಳು ಹಾಗೂ ವೈದ್ಯಕೀಯ ನಿಯಂತ್ರಣ ಪ್ರಾಧಿಕಾರದ ಸೂಚನೆಯ ಮೇರೆಗೆ ಲಸಿಕೆಯ ದರ ನಿಗದಿಯಾಗಲಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಭಾರತೀಯನಿಗೂ ಕೋವಿಡ್ ಲಸಿಕೆ ನೀಡಲು ಬಹುಶಃ 2 ರಿಂದ 3 ವರ್ಷ ಬೇಕಾಗಬಹುದು. ಕೇವಲ ಸರಕು ಸಾಗಾಣಿಕೆಯ ಸಮಸ್ಯೆ ಮಾತ್ರವಲ್ಲದೆ ಬಜೆಟ್, ಮೂಲಭೂತ ಸೌಕರ್ಯ ಹಾಗೂ ಸ್ವ ಇಚ್ಛೆಯಿಂದ ಎಲ್ಲರೂ ಲಸಿಕೆ ಪಡೆಯುವ ಕಾರಣಗಳಿಂದ ಇಷ್ಟೊಂದು ಅವಧಿ ಬೇಕಾಗಬಹುದು ಎಂದು ಆದಾರ್ ಪೂನಾವಾಲಾ ತಿಳಿಸಿದರು.