ನವದೆಹಲಿ:ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ 'ರಾಜೀವ್ ಕ್ರಾಂತಿ' ಅಭಿಯಾನ ಆರಂಭಿಸಲು ನಿರ್ಧಾರ ಕೈಗೊಂಡಿದ್ದು, ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಇದಕ್ಕೆ ನಾಳೆ ಚಾಲನೆ ನೀಡಲಿದ್ದಾರೆ. ದೇಶದ ಯುವ ಜನರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಈ ಅಭಿಯಾನ ಪ್ರಾರಂಭ ಮಾಡಲು ಮುಂದಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಾಳೆ(ಮೇ 21) ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಇವರಿಗೆ ಅನೇಕ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ ಎಂದು ಎಐಸಿಸಿ ಹಿರಿಯ ಪದಾಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ವಿದೇಶಕ್ಕೆ ತೆರಳುತ್ತಿರುವ ಕಾರಣ ಸಭೆಯಲ್ಲಿ ಭಾಗಿಯಾಗುತ್ತಿಲ್ಲ.
ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಗೊಳ್ಳಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ದೇಶದ ಯುವಕರನ್ನ ಮುನ್ನಲೆಗೆ ತರುವ ಉದ್ದೇಶ ಹೊಂದಲಾಗಿದ್ದು, ಅದಕ್ಕಾಗಿ ರಾಜೀವ್ ಕ್ರಾಂತಿ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ. ರಾಜೀವ್ ಗಾಂಧಿ ದೇಶದ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಟೆಲಿಕಾಂ ಕ್ರಾಂತಿಗೆ ನಾಂದಿ ಹಾಡಿದ್ದು, 18 ವರ್ಷದವರಿಗೆ ಮತದಾನದ ಹಕ್ಕು ಅಧಿಕಾರ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಶ್ರೇಯ ಸಲ್ಲುತ್ತದೆ.