ಆದಂಪುರ (ಪಂಜಾಬ್):ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಂಜಾಬ್‌ನ ರಾಧಾ ಸೋಮಿ ಸತ್ಸಂಗ ಬಿಯಾಸ್ ಡೇರಾಕ್ಕೆ ಭೇಟಿ ನೀಡಿದರು. ಡೇರಾ ಮುಖ್ಯಸ್ಥ ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಅವರನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ಭೇಟಿ ಮಾಡಿದರು.
ಇದಕ್ಕೂ ಮುನ್ನ ಪಂಜಾಬ್ ಕ್ಯಾಬಿನೆಟ್ ಸಚಿವ ಬ್ರಹ್ಮ ಶಂಕರ್ ಜಿಂಪಾ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಬರಮಾಡಿಕೊಂಡರು. ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಜಾಂಜುವಾ ಮತ್ತು ಡಿಜಿಪಿ ಗೌರವ್ ಯಾದವ್ ಉಪಸ್ಥಿತರಿದ್ದರು.
ಈ ವರ್ಷದ ಫೆಬ್ರವರಿಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ದೆಹಲಿಯಲ್ಲಿ ಡೇರಾ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು.
ಈ ಕುರಿತು ಶುಕ್ರವಾರ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ನಾಳೆ ನವೆಂಬರ್ 5 ರಂದು ರಾಧಾ ಸೋಮಿ ಸತ್ಸಂಗ ಬಿಯಾಸ್‌ಗೆ ಭೇಟಿ ನೀಡುವ ಸೌಭಾಗ್ಯವನ್ನು ಹೊಂದಿದ್ದೇನೆ. ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಜಿ ಅವರ ನಾಯಕತ್ವದಲ್ಲಿ ಆರ್‌ಎಸ್‌ಎಸ್‌ಬಿ ಹಲವಾರು ಸಮುದಾಯ ಸೇವಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದರು.
ಈ ಭೇಟಿಯ ನಂತ ಪಿಎಂ ಮೋದಿ ಹಿಮಾಚಲ ಪ್ರದೇಶಕ್ಕೆ ತೆರಳಿ, ಸುಂದರ್ ನಗರ ಮತ್ತು ಸೋಲನ್‌ನಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ.
ಇದನ್ನೂ ಓದಿ: ಡೇರಾ ಬಾಬಾಗೆ 40 ದಿನ ಪೆರೋಲ್.. ಹರಿಯಾಣ ಸರ್ಕಾರಕ್ಕೆ ಹೈಕೋರ್ಟ್ ವಕೀಲ ನೋಟಿಸ್