ಭೋಪಾಲ್ (ಮಧ್ಯಪ್ರದೇಶ):ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಕ್ಷದ "ಮೇರಾ ಬೂತ್ ಸಬ್ಸೆ ಮಜ್ಬೂತ್" ಅಭಿಯಾನದ ಅಡಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ತ್ರಿವಳಿ ತಲಾಖ್ ಇಸ್ಲಾಂನಿಂದ ವಿಮುಖವಾಗಿದ್ದರೆ, ಈಜಿಪ್ಟ್, ಇಂಡೋನೇಷ್ಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮುಂತಾದ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಏಕೆ ಆಚರಣೆಯಲ್ಲಿಲ್ಲ ಎಂದು ಪ್ರಶ್ನಿಸಿದರು.
ಏಕರೂಪ ನಾಗರಿಕ ಸಂಹಿತೆ ಪರ ಮಾತನಾಡಿದ ಅವರು, "ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ನಿಯಮಗಳು" ಹೊಂದಲು ಕೆಲಸ ಮಾಡುವುದಿಲ್ಲ ಮತ್ತು ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. 90 ರಷ್ಟು ಸುನ್ನಿ ಮುಸ್ಲಿಮರಿರುವ ಈಜಿಪ್ಟ್ 80 ರಿಂದ 90 ವರ್ಷಗಳ ಹಿಂದೆ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿದೆ ಎಂದು ಅವರು ಗಮನಸೆಳೆದರು.
ತ್ರಿವಳಿ ತಲಾಖ್ ಅನ್ನು ಪ್ರತಿಪಾದಿಸುವವರು, ವೋಟ್ ಬ್ಯಾಂಕ್‌ಗಾಗಿ ಹಸಿದಿರುವ ಈ ಜನರು ಮುಸ್ಲಿಂ ಹೆಣ್ಣು ಮಕ್ಕಳಿಗೆ ತೀವ್ರ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ತ್ರಿವಳಿ ತಲಾಖ್ ಕಾನೂನು ಪದ್ಧತಿ ಇಲ್ಲ: ಪ್ರಧಾನಿ ಮೋದಿ ತ್ರಿವಳಿ ತಲಾಖ್ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಕುಟುಂಬವನ್ನು ನಾಶಪಡಿಸುತ್ತದೆ. ಕುಟುಂಬದವರು ಬಹಳ ಭರವಸೆಯಿಂದ ಮದುವೆಯಾಗುವ ಮಹಿಳೆಯನ್ನು ತ್ರಿವಳಿ ತಲಾಖ್ ನಂತರ ವಾಪಸ್ ಕಳುಹಿಸಿದಾಗ, ಪೋಷಕರು ಮತ್ತು ಸಹೋದರರು ಮಹಿಳೆಯ ಬಗ್ಗೆ ಕಾಳಜಿಯಿಂದಾಗಿ ನೋವು ಅನುಭವಿಸುತ್ತಾರೆ. ಈಗಲೂ ಮುಸ್ಲಿಂ ಸಹೋದರಿಯರು ಮತ್ತು ಹೆಣ್ಣುಮಕ್ಕಳು ನಾನು ಎಲ್ಲಿಗೆ ಹೋದರೂ ಬಿಜೆಪಿ ಮತ್ತು ಮೋದಿಯೊಂದಿಗೆ ನಿಲ್ಲುತ್ತಾರೆ ಎಂದು ಹೇಳಿದರು.
ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವವರ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ಅವರು ತಮ್ಮ ಹಿತಾಸಕ್ತಿಗಳಿಗಾಗಿ ಕೆಲವರನ್ನು ಪ್ರಚೋದಿಸುತ್ತಿದ್ದಾರೆ. ಯಾವ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಅವರನ್ನು ಪ್ರಚೋದಿಸುತ್ತಿವೆ ಮತ್ತು ನಾಶಪಡಿಸುತ್ತಿವೆ ಎಂಬುದನ್ನು ಭಾರತೀಯ ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳ ಬಗ್ಗೆ ಮಾತನಾಡುತ್ತದೆ ಎಂದು ಅವರು ಹೇಳಿದರು.
ಓದಿ:ವಂದೇ ಭಾರತ್ ರೈಲು ಸಂಚಾರ ಆರಂಭ: ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಿ ಖುಷಿಪಟ್ಟ ಗೆಹ್ಲೋಟ್, ಪ್ರಹ್ಲಾದ್ ಜೋಶಿ
ಬೆಂಗಳೂರು-ಧಾರವಾಡ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ರಾಣಿ ಕಮಲಪತಿ ರೈಲು ನಿಲ್ದಾಣದಿಂದ ಇಂದು ವರ್ಚುವಲ್ ಆಗಿ ಚಾಲನೆ ನೀಡಿದರು. ಇದರೊಂದಿಗೆ ಇತರ ನಾಲ್ಕು ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಿದ್ದಾರೆ.
ಬೆಂಗಳೂರು-ಧಾರವಾಡ, ಭೋಪಾಲ್-ಜಬಲ್ಪುರ್, ಖಜೂರಾಹೊ - ಭೋಪಾಲ್-ಇಂದೋರ್, ಮಡಗಾಂ-ಮುಂಬೈ, ಹತಿಯಾ-ಪಾಟ್ನಾ ರೈಲುಗಳಿಗೆ ಚಾಲನೆ ಸಿಕ್ಕಿದೆ. ಈ ಮೂಲಕ ದೇಶದಲ್ಲಿ ಒಟ್ಟು 23 ರೈಲುಗಳು ಕಾರ್ಯ ನಿರ್ವಹಿಸಲಿವೆ. ಬೆಂಗಳೂರು ಧಾರವಾಡ ರೈಲು ಕರ್ನಾಟಕದ ಎರಡನೇಯ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ. ನಾಳೆ ಸಂಜೆ 5.45ಕ್ಕೆ ಬೆಂಗಳೂರಿನಿಂದ ರೈಲು ವೇಳಾ ಪಟ್ಟಿ ಪ್ರಕಾರ ಚಲಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ. ಇಲ್ಲಿ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಐದು ವಂದೇ ಭಾರತ್ ರೈಲುಗಳಿಗೆ ಧ್ವಜಾರೋಹಣ ಮಾಡಿದ ನಂತರ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ಮೋದಿಗೆ ಸಾಥ್ ನೀಡಿದರು.