ನವದೆಹಲಿ:ದೇಶಾದ್ಯಂತ ಇಂದು 74ನೇ ಗಣರಾಜ್ಯೋತ್ಸವ ಕಳೆಗಟ್ಟಿತ್ತು. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರು ಕಳೆದ ವರ್ಷ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದರು. ಕರ್ತವ್ಯ ಪಥದಲ್ಲಿ ಸಾಂಪ್ರದಾಯಿಕ ಕುಶಾಲುತೋಪು ಸಿಡಿಸಿ ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ವಿದೇಶದಿಂದ ಆಗಮಿಸಿದ ಅತಿಥಿಗಳ ಮುಂದೆ 21 ಗನ್ ವಂದನೆ ಸಲ್ಲಿಸುವುದು ಪದ್ಧತಿ. ಕರ್ತವ್ಯ ಪಥಕ್ಕೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ರಾಷ್ಟ್ರಪತಿ ಮುರ್ಮು ಅವರನ್ನು ಅವರ ಅಶ್ವಾರೋಹಿಗಳು, ಅಂಗರಕ್ಷಕರು ರಾಷ್ಟ್ರಪತಿ ಭವನದಿಂದ ಬೆಂಗಾವಲು ನೀಡಿ ಕರೆ ತಂದರು. ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ.
ಈಜಿಪ್ಟ್ ಅಧ್ಯಕ್ಷರು ಮುಖ್ಯ ಅತಿಥಿ:ಈ ಸಲದ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೈಮಾನಿಕ ಪ್ರದರ್ಶನದಲ್ಲಿ ಈಜಿಪ್ಟ್ ಅಧ್ಯಕ್ಷರು ಭಾಗವಹಿಸಿ ಭಾರತದ ಸೇನಾಶಕ್ತಿ ಮತ್ತು ಪರಂಪರೆಯನ್ನು ಸವಿದರು.
ದೇಶೀಯ ಶಸ್ತ್ರಾಸ್ತ್ರ ಪ್ರದರ್ಶನ:ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಆತ್ಮ ನಿರ್ಭರ ಭಾರತದಡಿ ನಿರ್ಮಿಸಲಾದ ದೇಶೀಯ ಶಸ್ತ್ರಾಸ್ತ್ರಗಳು ಝಳಪಿಸಿದವು. ಕರ್ತವ್ಯ ಪಥದಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಿತು. 'ಮೇಡ್ ಇನ್ ಇಂಡಿಯಾ' 105 ಎಂಎಂ ಇಂಡಿಯನ್ ಫೀಲ್ಡ್ ಗನ್, LCH ಪ್ರಚಂದ್, ಕೆ. - 9 ವಜ್ರ ಹೊವಿಟ್ಜರ್‌ಗಳು, ಎಂಬಿಟಿ ಅರ್ಜುನ್, ಕ್ಷಿಪಣಿ ಸಹಿತ ನಾಗ್ ಆ್ಯಂಟಿ ಟ್ಯಾಂಕ್, ಆಕಾಶ್ ವಾಯು ರಕ್ಷಣಾ ಕ್ಷಿಪಣಿಗಳು, ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳು.
ಸ್ತಬ್ಧಚಿತ್ರಗಳ ಪ್ರದರ್ಶನದ ಮೆರುಗು:ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರ ಗಮನ ಸೆಳೆಯಿತು. ಸತತವಾಗಿ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ತನ್ನದಾಗಿಸಿಕೊಂಡಿತು. ಇದಲ್ಲದೇ, ವಿವಿಧ ಥೀಮ್ಗಳ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು.