ಸುಖೋಯ್ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಯಣ ಗುವಾಹಟಿ (ಅಸ್ಸೋಂ):ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಯುದ್ಧ ವಿಮಾನದಲ್ಲಿ ಪ್ರಯಾಣಿಸಿದರು. ಅಸ್ಸೋಂದ ತೇಜ್‌ಪುರದ ವಾಯುಪಡೆಯ ನೆಲೆಗೆ ಸುಖೋಯ್-30 ಎಂಕೆಐ ಫೈಟರ್ ಜೆಟ್‌ನಲ್ಲಿ ಸೇನೆಯ ಸಮವಸ್ತ್ರದಲ್ಲಿ ರಾಷ್ಟ್ರಪತಿ ಆಗಮಿಸಿದರು. ಗ್ರೂಪ್ ಕ್ಯಾಪ್ಟನ್ ನಬಿನ್ ಕುಮಾರ್ ತಿವಾರಿ ಅವರು ರಾಷ್ಟ್ರಪತಿ ಅವರಿದ್ದ ವಿಮಾನವನ್ನು ಹಾರಾಟ ನಡೆಸಿದರು.
ರಾಷ್ಟ್ರಪತಿ ಮುರ್ಮು ಸದ್ಯ ಅಸ್ಸೋಂ ಪ್ರವಾಸದಲ್ಲಿದ್ದು, ತಮ್ಮ ಪ್ರವಾಸದ ಮೂರನೇ ದಿನವಾದ ಇಂದು ಯುದ್ಧ ವಿಮಾನದಲ್ಲಿ ಪ್ರಯಾಣ ಮಾಡಿದರು. ರಾಷ್ಟ್ರಪತಿ ಮುರ್ಮು ಅವರು ಸುಖೋಯ್ ವಿಮಾನದಲ್ಲಿ ಕೋ-ಪೈಲಟ್ ಸೀಟಿನಲ್ಲಿ ಕುಳಿತು ಧ್ವನಿಯ ಎರಡು ಪಟ್ಟು ವೇಗದಲ್ಲಿ ಪ್ರಯಾಣಿಸಿ ದಾಖಲೆ ನಿರ್ಮಿಸಿದರು.
ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ 2ನೇ ಮಹಿಳಾ ರಾಷ್ಟ್ರಪತಿ:ಸುಖೋಯ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಾಗಿದ್ದಾರೆ. ಈ ಹಿಂದೆ 2009ರಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಪುಣೆಯ ವಾಯುಪಡೆಯ ವಾಯುನೆಲೆಯಲ್ಲಿ ಸುಖೋಯ್ -30 ಎಂಕೆಐನಲ್ಲಿ ಪ್ರಯಾಣಿಸಿದ್ದರು.
ತೇಜ್‌ಪುರದ ವಾಯು ಪಡೆಯ ನೆಲೆಗೆ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿಗಳು ಭೇಟಿ ನೀಡಿರುವುದು ಬಹಳ ಮಹತ್ವದ್ದಾಗಿದೆ ಎಂದೇ ಪರಿಗಣಿಸಲಾಗಿದೆ. ಏಕೆಂದರೆ ಕೆಲವೇ ದಿನಗಳ ಹಿಂದೆ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳನ್ನು ತನ್ನದೇ ಎಂದು ಮರು ನಾಮಕರಣ ಮಾಡಿತ್ತು. ಈ ಮೂಲಕ ಅರುಣಾಚಲಯದ ಸ್ಥಳಗಳ ಮೇಲೆ ತನ್ನ ಸಾರ್ವಭೌಮತ್ವ ಸಾಧಿಸುವ ಯತ್ನ ಮಾಡಿತ್ತು.
ಇದನ್ನೂ ಓದಿ:ಅರುಣಾಚಲದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ: ಆವಿಷ್ಕಾರದ ಹೆಸರಿನಿಂದ ವಾಸ್ತವತೆ ಬದಲಾಗಲ್ಲ ಎಂದ ಭಾರತ
ಯುದ್ಧ ವಿಮಾನದಲ್ಲಿ ಪ್ರಯಾಣಿಸುವ ಮುನ್ನ ರಾಷ್ಟ್ರಪತಿಗಳನ್ನು ಅಸ್ಸೋಂ ರಾಜ್ಯಪಾಲ ಗೋಲಾಬ್ ಚಂದ್ ಕಟಾರಿಯಾ ಮತ್ತು ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಬರ ಮಾಡಿಕೊಂಡರು. ಮತ್ತೊಂದೆಡೆ, ಮೂರು ಸೇನೆಗಳಾದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯ ಕಮಾಂಡರ್ ಅವರನ್ನು ಪೂರ್ವ ವಾಯು ಕಮಾಂಡ್ ಮುಖ್ಯಸ್ಥ ಎಸ್ಪಿ ಧನಕರ್ ಸ್ವಾಗತಿಸಿದರು.
ಅತ್ಯಾಧುನಿಕ ವಿಮಾನ ಯುದ್ಧ:ಸುಖೋಯ್ ಫೈಟರ್ ಜೆಟ್ ಇಬ್ಬರು ಪೈಲಟ್‌ಗಳ ಆಸನಗಳನ್ನು ಹೊಂದಿರುವ ಆಧುನಿಕ ವಿಮಾನವಾಗಿದೆ. ಈ ವಿಮಾನವು ಎರಡು ಎಂಜಿನ್‌ಗಳನ್ನು ಹೊಂದಿರುವ ಬಹು ಪಾತ್ರದ ಯುದ್ಧ ವಿಮಾನವಾಗಿದೆ. ತೇಜ್‌ಪುರದಲ್ಲಿರುವ ವಾಯುಪಡೆಯ ನೆಲೆಯು ದೇಶದ ಅತಿ ದೊಡ್ಡ ಯುದ್ಧ ವಾಯುನೆಲೆಗಳಲ್ಲಿ ಒಂದಾಗಿದೆ. ಈ ವಾಯುನೆಲೆಯನ್ನು ಬ್ರಿಟಿಷರು ನಿರ್ಮಿಸಿದ್ದರು. 1959ರ ಸೆಪ್ಟೆಂಬರ್ 29ರಂದು ವಾಯುಪಡೆಯ ಪೂರ್ಣ ಪ್ರಮಾಣದ ನೆಲೆಯಾಗಿ ರೂಪಿಸಲಾಗಿದೆ. ಚೀನಾ-ಭಾರತ ಗಡಿ ಬಳಿಯ ತೇಜ್‌ಪುರ ವಾಯುನೆಲೆ ಇದ್ದು, ಇತ್ತೀಚಿಗೆ ಸುಖೋಯ್-30 ಎಂಕೆಐ ಫೈಟರ್ ಜೆಟ್‌ಗಳ ಎರಡು ಸ್ಕ್ವಾಡ್ರನ್‌ಗಳನ್ನು ನಿಯೋಜಿಸಲಾಗಿತ್ತು.
ರಾಷ್ಟ್ರಪತಿ ಮುರ್ಮು ತಮ್ಮ ಅಸ್ಸೋಂ ಪ್ರವಾಸದಲ್ಲಿ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗುರುವಾರ ಗುವಾಹಟಿ ಹೈಕೋರ್ಟ್ 75 ವರ್ಷಗಳನ್ನು ಪೂರೈಸಿದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೇ, ಅಸ್ಸೋಂ ಪರ್ವತಾರೋಹಣ ಅಸೋಸಿಯೇಷನ್ ಆಯೋಜಿಸಿದ್ದ ಮೌಂಟ್ ಕಾಂಚನ್‌ಜುಂಗಾ ಎಕ್ಸ್‌ಪೆಡಿಶನ್ 2023ಕ್ಕೆ ಹಸಿರು ನಿಶಾನೆ ತೋರಿದ್ದರು.
ಇದನ್ನೂ ಓದಿ:ತೈವಾನ್ ಸುತ್ತಮುತ್ತ ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ: 13 ವಿಮಾನ, 3 ಯುದ್ಧನೌಕೆಗಳು ಪತ್ತೆ