ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಯಾವುದೇ ರೀತಿಯ ಅರ್ಥಪೂರ್ಣ ನಿರ್ಧಾರ ಕೈಗೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಮುಂಬರುವ ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ನ ಚಿಂತನ ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಪ್ರಶಾಂತ್ ಕಿಶೋರ್, ಈ ಸಭೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿಗೆ ಸರಿಸಾಟಿಯಾಗಿ ಕಾಂಗ್ರೆಸ್ ಬಲಗೊಳ್ಳಲು ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿರುವ ಅವರು, ನಾನು ಹೇಳಿರುವ ಯಾವುದೇ ಸಲಹೆಗಳನ್ನ ಕಾಂಗ್ರೆಸ್ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದರು.
ಈ ಚಿಂತನ ಶಿಬಿರದಲ್ಲಿ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಸಮಯ ನೀಡಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಅರ್ಥಪೂರ್ಣ ನಿರ್ಧಾರ ಕೈಗೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ, ರಾಜಸ್ಥಾನದಲ್ಲಿ ನಡೆದ ಮೂರು ದಿನಗಳ ಕಾರ್ಯತಂತ್ರದಲ್ಲಿ ಯಾವುದೇ ಸುಧಾರಣೆಯ ಕ್ರಮ ಕೈಗೊಂಡಿಲ್ಲ ಎಂದರು.
ಇದನ್ನೂ ಓದಿ:ರಾಜೀವ್ ಗಾಂಧಿ ಪುಣ್ಯತಿಥಿ.. 'ರಾಜೀವ್ ಕ್ರಾಂತಿ' ಅಭಿಯಾನಕ್ಕೆ ಪ್ರಿಯಾಂಕಾ ಚಾಲನೆ
ಕಳೆದ ಕೆಲ ದಿನಗಳ ಹಿಂದೆ ಪ್ರಶಾಂತ್ ಕಿಶೋರ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತಹ ಕೆಲಸಗಳು ಸಹ ನಡೆದಿದ್ದವು. ಆದರೆ, ಪಕ್ಷಕ್ಕೆ ಸೇರಲು ಹಿಂದೇಟು ಹಾಕಿದ್ದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಅತಿ ಅವಶ್ಯಕವಾಗಿದೆ ಎಂದಿದ್ದರು.