ಕರ್ನಾಟಕ

karnataka

By PTI

Published : Nov 30, 2023, 8:08 AM IST

ETV Bharat / bharat

ತೆಲಂಗಾಣ ವಿಧಾನಸಭಾ ಚುನಾವಣೆ: ಎಲ್ಲ 119 ಕ್ಷೇತ್ರಗಳಲ್ಲಿ ಮತದಾನ

Telangana assembly elections-polling begins: ತೆಲಂಗಾಣ ವಿಧಾನಸಭೆಗೆ ಇಂದು ರಾಜ್ಯಾದ್ಯಂತ ಮತದಾನ ಆರಂಭವಾಗಿದೆ. 3.26 ಕೋಟಿಗೂ ಹೆಚ್ಚು ಮತದಾರರು ತಮ್ಮ ತೀರ್ಪನ್ನು ಇವಿಎಂಗಳಲ್ಲಿ ಭದ್ರಪಡಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳ ಮೇಲೆ ಚುನಾವಣಾ ಆಯೋಗ ನಿಗಾವಹಿಸಿದೆ.

Polling underway for 119 assembly seats
ತೆಲಂಗಾಣ ವಿಧಾನಸಭಾ ಚುನಾವಣೆ: 119 ಕ್ಷೇತ್ರಗಳಲ್ಲಿ ಮತದಾನ ಆರಂಭ

ಹೈದರಾಬಾದ್:ತೆಲಂಗಾಣದ ಎಲ್ಲ 119 ವಿಧಾನಸಭಾ ಕ್ಷೇತ್ರಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಇಂದು ಮತದಾನ ನಡೆಯುತ್ತಿದೆ. ಪೊಲೀಸ್ ಭದ್ರತೆಯ ನಡುವೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆ ಸಮೀಪ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಒಟ್ಟು 35,655 ಮತಗಟ್ಟೆಗಳಲ್ಲಿ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು ಎಂದು ಚು.ಅಧಿಕಾರಿಗಳು ತಿಳಿಸಿದ್ದಾರೆ.

106 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಪೈಕಿ 13 ನಕ್ಸಲ್‌ಪೀಡಿತ ಕ್ಷೇತ್ರಗಳಲ್ಲಿ ಸಂಜೆ 4 ಕ್ಕೆ ಮತದಾನ ಮುಕ್ತಾಯವಾಗಲಿದೆ. ರಾಜ್ಯದಲ್ಲಿ 1,63,13,268 ಪುರುಷ ಮತದಾರರು ಮತ್ತು 1,63,02,261 ಮಹಿಳಾ ಮತದಾರರು ಸೇರಿದಂತೆ ಒಟ್ಟು 3.26 ಕೋಟಿ ಅರ್ಹ ಮತದಾರರಿದ್ದಾರೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪುತ್ರ ಹಾಗು ಸಚಿವ ಕೆ.ಟಿ.ರಾಮರಾವ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ ಮತ್ತು ಬಿಜೆಪಿ ಲೋಕಸಭಾ ಸದಸ್ಯರಾದ ಬಂಡಿ ಸಂಜಯ್ ಕುಮಾರ್ ಮತ್ತು ಡಿ.ಅರವಿಂದ್ ಸೇರಿದಂತೆ 2,290 ಸ್ಪರ್ಧಿಗಳು ಕಣದಲ್ಲಿದ್ದಾರೆ. ಅಕ್ಟೋಬರ್ 9ರಂದು ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ರಾಜ್ಯದಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದೆ.

ಆಡಳಿತಾರೂಢ ಬಿಆರ್‌ಎಸ್ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಕ್ರಮವಾಗಿ 111 ಮತ್ತು 8 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ತನ್ನ ಮಿತ್ರಪಕ್ಷವಾದ ಸಿಪಿಐಗೆ ಒಂದು ಸ್ಥಾನ ನೀಡಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ನಗರದ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ವಿಧಾನಸಭೆ ಚುನಾವಣೆಗೆ 2.5 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ತಿಳಿಸಿದ್ದಾರೆ. ಚುನಾವಣೆಗೆ ಭದ್ರತಾ ವ್ಯವಸ್ಥೆಗಳ ಭಾಗವಾಗಿ ರಾಜ್ಯಾದ್ಯಂತ 375 ಕಂಪನಿಗಳ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್​) ಜೊತೆಗೆ ರಾಜ್ಯ ಮತ್ತು ನೆರೆಯ ರಾಜ್ಯಗಳಿಂದ ಪೊಲೀಸರು ಮತ್ತು ಗೃಹರಕ್ಷಕರನ್ನು ಒಳಗೊಂಡ ಸುಮಾರು 77,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೆಲಂಗಾಣದಲ್ಲಿ ಮೊದಲ ಬಾರಿಗೆ ವಿಶೇಷಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಮನೆ ಮತದಾನದ ಸೌಲಭ್ಯ ಒದಗಿಸಲಾಗಿದೆ.

ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ನವೆಂಬರ್ 29ರವರೆಗೆ ಕಾನೂನು ಜಾರಿ ಸಂಸ್ಥೆಗಳು ರಾಜ್ಯದಲ್ಲಿ ಸುಮಾರು 745 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ, ಮದ್ಯ ಹಾಗು ಉಚಿತ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.

ನೌಕರರು ಮತ ಚಲಾಯಿಸಲು ಅನುವು ಮಾಡಿಕೊಡಲು ಐಟಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳಿಗೆ ನವೆಂಬರ್ 30ರಂದು ರಜೆ ಘೋಷಿಸಲು ಚುನಾವಣಾ ಆಯೋಗ ಆದೇಶಿಸಿತ್ತು. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ, ಎನ್. ಇಂದ್ರಸೇನಾ ರೆಡ್ಡಿ ಇಂದು ಮತ ಚಲಾಯಿಸಲಿದ್ದಾರೆ. ಕೆ.ಚಂದ್ರಶೇಖರ್ ರಾವ್ ಸಿದ್ದಿಪೇಟೆ ಜಿಲ್ಲೆಯ ಚಿಂತಮಡಕ ಗ್ರಾಮದಲ್ಲಿ ಮತದಾನ ಮಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:'ಯುವ ರಾಜ್ಯ' ತೆಲಂಗಾಣದ 119 ಕ್ಷೇತ್ರಗಳಿಗೆ ನಾಳೆ ಮತದಾನ: 2,290 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ABOUT THE AUTHOR

...view details