ರಾಜ್‌ಕೋಟ್ (ಗುಜರಾತ್):ಚುನಾವಣೆ ಅಂದಮೇಲೆ ರಾಜಕೀಯ ಪಕ್ಷಗಳ ಭರಾಟೆ, ಅಬ್ಬರದ ಪ್ರಚಾರ ಎಲ್ಲವೂ ಸರ್ವೇಸಾಮಾನ್ಯ. ನಗರ, ಗ್ರಾಮಗಳಿಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಾರೆ. ಸಾಧ್ಯ, ಅಸಾಧ್ಯಗಳ ಬಿಟ್ಟಿ ಭರವಸೆಯನ್ನಂತೂ ಕೊಟ್ಟೆ ಕೊಡ್ತಾರೆ. ಇಂತಹ ರಾಜಕೀಯ ಪ್ರಚಾರವನ್ನು ಗುಜರಾತ್ನ ಈ ಹಳ್ಳಿಯಲ್ಲಿ 40 ವರ್ಷಗಳಿಂದ ನಿಷೇಧಿಸಲಾಗಿದೆ. ಯಾವುದೇ ಪಕ್ಷಗಳು ಇಲ್ಲಿ ಪ್ರಚಾರ ಮಾಡುವಂತಿಲ್ಲ. ವಿಶೇಷ ಅಂದ್ರೆ ಇಲ್ಲಿನ ಜನರು ಕಡ್ಡಾಯ ಮತದಾನ ಮಾಡಬೇಕು. ಇಲ್ಲವಾದಲ್ಲಿ ದಂಡ ಕಟ್ಟಲೇಬೇಕು.
ಅಬ್ಬಾ.. ಈ ಕಾಲದಲ್ಲೂ ಇಂತಹ ನಿಬಂಧನೆಗೆ ಒಳಪಟ್ಟ ಗ್ರಾಮ ಯಾವುದು ಅಂತೀರಾ. ರಾಜ್‌ಕೋಟ್ ನಗರದಿಂದ 20 ಕಿಲೋಮೀಟರ್ ದೂರವಿರುವ ರಾಜ್ ಸಮಾಧಿಯಾಲ ರಾಜಕೀಯ ಗೋಜಲಿನಿಂದ ದೂರವಿರುವ ನೆಮ್ಮದಿಯ ಗ್ರಾಮ. ಇಲ್ಲಿ 1700 ಕ್ಕೂ ಅಧಿಕ ಜನರಿದ್ದು, 995 ಅರ್ಹ ಮತದಾರರಿದ್ದಾರೆ.
ರಾಜಕೀಯ ಪಕ್ಷಗಳಿಗೆ ಯಾಕೆ ನಿರ್ಬಂಧ:ರಾಜ್ ಸಮಾಧಿಯಾಲ ಗ್ರಾಮದಲ್ಲಿ 1983 ರಿಂದಲೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಲ್ಲಿ ಯಾವುದೇ ಪಕ್ಷದ ನಾಯಕರು ಬಂದು ಮತ ನೀಡಿ ಎಂದು ಕೇಳುವಂತಿಲ್ಲ. ಕಾರಣ ರಾಜಕಾರಣಿಗಳ ಗ್ರಾಮ ಪ್ರವೇಶದಿಂದ ಇಲ್ಲಿನ ಜನರು ತಪ್ಪು ದಾರಿ ಹಿಡಿದು ಮತವನ್ನು ಮಾರಿಕೊಳ್ಳುತ್ತಾರೆ. ಇದು ಭವಿಷ್ಯಕ್ಕೆ ತೊಡಕಾಗಲಿದೆ ಎಂದು ಈ ನಿರ್ಬಂಧ ವಿಧಿಸಲಾಗಿದೆ.
ಗ್ರಾಮಾಭಿವೃದ್ಧಿ ಸಮಿತಿ ನಿರ್ಧಾರವೇ ಅಂತಿಮ:ಗ್ರಾಮದ ಜನರೆಲ್ಲರೂ ಸೇರಿ ಗ್ರಾಮಾಭಿವೃದ್ಧಿ ಸಮಿತಿ ರಚಿಸಿಕೊಂಡಿದ್ದು, ಅದರ ನಿರ್ಧಾರಗಳೇ ಅಂತಿಮವಾಗಿರುತ್ತವೆ. ಸಮಿತಿ ರೂಪಿಸುವ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಲೇಬೇಕು. ಇಲ್ಲವಾದಲ್ಲಿ ಉಲ್ಲಂಘನೆಗೆ ದಂಡ ತೆರಬೇಕು.