ನವದೆಹಲಿ:ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದು ಮಹತ್ವದ ತೀರ್ಪು ನೀಡಿದೆ. ಇದನ್ನು ಆಡಳಿತಾರೂಢ ಬಿಜೆಪಿ ಸ್ವಾಗತಿಸಿದರೆ, ಕಾಶ್ಮೀರಿ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸ ಭರವಸೆಯ ತೀರ್ಪು:370 ನೇ ವಿಧಿಯ ರದ್ದತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಇದು ಜಮ್ಮು, ಕಾಶ್ಮೀರ ಮತ್ತು ಲಡಾಖ್ನ ಸಹೋದರ, ಸಹೋದರಿಯರಿಗೆ ಹೊಸ ಭರವಸೆ, ಪ್ರಗತಿ, ಏಕತೆಯನ್ನು ಪ್ರತಿಧ್ವನಿಸುವ ಘೋಷಣೆಯಾಗಿದೆ ಎಂದು ಬಣ್ಣಿಸಿದರು.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಿಎಂ ಮೋದಿ, ಈ ತೀರ್ಪು ಐತಿಹಾಸಿಕವಾಗಿದೆ. ಕೋರ್ಟ್ ಭಾರತೀಯರ ಏಕತೆಯನ್ನು ಸಾರಿದೆ. ಜಮ್ಮು ಕಾಶ್ಮೀರ ಮತ್ತು ಲಡಾಖ್ನ ನಾಗರಿಕರ ಕನಸುಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರದ ಎಲ್ಲ ಯೋಜನೆಗಳು ನಿಮ್ಮನ್ನು ತಲುಪುವಂತೆ ಮಾಡುವುದು ಮತ್ತು ಅತ್ಯಂತ ದುರ್ಬಲ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನೆಗಳು ಮುಟ್ಟಿಸಲು ನಾವು ನಿರ್ಧರಿಸಿದ್ದೇವೆ. 370 ನೇ ವಿಧಿಯು ಇದಕ್ಕೆಲ್ಲಾ ಅಡ್ಡಿಯಾಗಿತ್ತು. ಈಗ ಎಲ್ಲ ಆತಂಕಗಳು ನಿವಾರಣೆಯಾಗಿವೆ ಎಂದು ಹೇಳಿದರು.
ಉಜ್ವಲ ಭವಿಷ್ಯದ ದಾರಿದೀಪ:ಇಂದಿನ ತೀರ್ಪು ಕೇವಲ ಕಾನೂನಿನ ಮಾನ್ಯತೆಯಲ್ಲ. ಇದು ಉಜ್ವಲ ಭರವಸೆಯ ದಾರಿದೀಪವಾಗಿದೆ. ಬಲಿಷ್ಠ, ಅಖಂಡ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಹೊಸ ಜಮ್ಮು ಕಾಶ್ಮೀರಕ್ಕೆ ಈ ತೀರ್ಪು ನಾಂದಿ ಹಾಡಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರ ಸಾಂವಿಧಾನಿಕ ಎಂಬುದು ಸಾಬೀತಾಗಿದೆ ಎಂದರು.
ತೀರ್ಪು ನಿರಾಸೆ ತಂದಿದೆ:ಇಂದಿನ ಸುಪ್ರೀಂ ತೀರ್ಪು ಕಾಶ್ಮೀರಿಗರಿಗೆ ನಿರಾಸೆ ತಂದಿದೆ. ನಾನು ನಿರಾಶೆಗೊಂಡಿದ್ದೇನೆ, ಆದರೆ ನೊಂದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ, ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದರು. 370ನೇ ವಿಧಿ ನೀಡಿದ್ದ ವಿಶೇಷ ಸವಲತ್ತನ್ನು ರದ್ದು ಮಾಡಲು ಬಿಜೆಪಿ ದಶಕಗಳಿಂದ ಪ್ರಯತ್ನಿಸಿತು. ಇದಕ್ಕಾಗಿ ಅವರು ದೀರ್ಘಕಾಲ ಯೋಜಿಸಿದ್ದರು. ಸದ್ಯ ಅವರು ಮೇಲುಗೈ ಸಾಧಿಸಿದ್ದಾರೆ. ಆದರೆ, ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದರು.
ದುರದೃಷ್ಟಕರ, ಆದರೂ ಒಪ್ಪುವೆ- ಆಜಾದ್:ಸುಪ್ರೀಂಕೋರ್ಟ್ ತೀರ್ಪು ನೋವಿನ ಮತ್ತು ದುರದೃಷ್ಟಕರವಾಗಿದೆ. ಆದರೂ, ಅದನ್ನು ಒಪ್ಪಿಕೊಳ್ಳುವೆ. ಈ ನಿರ್ಧಾರ ಕಾಶ್ಮೀರಿಗರಿಗೆ ಸಂತೋಷ ತಂದಿಲ್ಲ. ಸರ್ಕಾರದ ರದ್ದತಿಯನ್ನು ಸಾಂವಿಧಾನಿಕ ಪೀಠ ಮಾನ್ಯ ಮಾಡಿದೆ. ಹೀಗಾಗಿ ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಗುಲಾಮ್ ನಬಿ ಆಜಾದ್ ಹೇಳಿದರು.
ಭಾರತದ ಕಲ್ಪನೆಯ ಸೋಲು:ಜಮ್ಮು -ಕಾಶ್ಮೀರದ ಜನರೇ ಇದು ನಿಮ್ಮ ಸೋಲಲ್ಲ. ಅಖಂಡ ಭಾರತದ ಕಲ್ಪನೆಯ ಸೋಲು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ವಿಡಿಯೋ ಸಂದೇಶ ರವಾನಿಸಿರುವ ಅವರು, ಸುಪ್ರೀಂ ತೀರ್ಪು ಭಾರತದ ಕಲ್ಪನೆಯ, ಗಾಂಧಿ ತತ್ವದ ಸೋಲಾಗಿದೆ. ಕಾಶ್ಮೀರಿಗಳೇ ನಿರಾಶೆರಾಗಬೇಡಿ. ಕಣಿವೆ ಹಲವಾರು ಏರಿಳಿತಗಳನ್ನು ಕಂಡಿದೆ. ನಮ್ಮನ್ನು ಗೃಹಬಂಧನದಲ್ಲಿ ಇಡಲಾಗಿದೆ. ಅಂಗಡಿ- ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ. ಜನರು ಹೊರಬರದಂತೆ ತಡೆಯಲಾಗಿದೆ. ಇದು ವರ್ಷಗಳಿಂದ ನಡೆದುಕೊಂಡು ಬಂದ ರಾಜಕೀಯ ಯುದ್ಧ. ಇದಕ್ಕಾಗಿ ಸಾಕಷ್ಟು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಮುಂದೆ ನಾವು ಒಗ್ಗೂಡಿ ಹೋರಾಡೋಣ ಎಂದು ಹೇಳಿದರು.
ಇದನ್ನೂ ಓದಿ:ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕ, ರದ್ದು ಮಾಡಿದ್ದು ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ