ಲಖನೌ(ಉತ್ತರ ಪ್ರದೇಶ): ಇಡೀ ದೇಶದಲ್ಲಿಯೇ ಸದ್ದು ಮಾಡಿದ್ದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ಇದ್ದು, ಸಂಜೆ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಕಸರತ್ತು ನಡೆಸಿವೆ. ಚುನಾವಣೆ ಸಂದರ್ಭದಲ್ಲಿ ಹಲವು ಜಿಲ್ಲೆಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ, ಹಲ್ಲೆ ಪ್ರಕರಣಗಳು ವರದಿಯಾಗಿದ್ದವು. ಹೆಚ್ಚಿನ ಸ್ಥಳಗಳಲ್ಲಿ ಪ್ರಾಬಲ್ಯ ಗಳಿಸುವ ಕಾರಣದಿಂದಾಗಿ, ಹಳೆಯ ರಾಜಕೀಯ ವಿವಾದಗಳಿಂದಾಗಿ ಘರ್ಷಣೆಗಳು ನಡೆದವು.
ರಾಜಕೀಯ ವಿವಾದಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕೆಲವು ಜಿಲ್ಲೆಗಳಿವೆ. ರಾಜ್ಯ ಮಾತ್ರವಲ್ಲದೆ ದೇಶದಲ್ಲೇ ಕಾಲಕಾಲಕ್ಕೆ ರಾಜಕೀಯದ ದಿಕ್ಕನ್ನೇ ಬದಲಿಸುವ ಕೆಲಸವನ್ನು ಈ ಜಿಲ್ಲೆಗಳು ಮಾಡಿವೆ. ಈ ವಿವಾದಗಳ ಅಫೆಕ್ಟ್ ಈ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೂ ಬೀರಬಹುದು ಎಂದು ಅಂದಾಜಿಸಲಾಗಿದೆ.
ಸುಲ್ತಾನ್‌ಪುರದಲ್ಲಿ ಸಂಘರ್ಷ:ಸುಲ್ತಾನ್‌ಪುರ ಕ್ಷೇತ್ರದಲ್ಲಿನ ಚುನಾವಣಾ ಸಂಘರ್ಷ ಭಾರಿ ಚರ್ಚೆಯಲ್ಲಿತ್ತು. ಗೋಮತಿ ನದಿಯ ದಡದಲ್ಲಿರುವ ಸುಲ್ತಾನಪುರದ ರಾಜಕೀಯ ಇತಿಹಾಸವು ಬಹಳ ಆಸಕ್ತಿದಾಯಕ ಮತ್ತು ವಿವಾದಾತ್ಮಕವಾಗಿದೆ. ಸುಲ್ತಾನ್‌ಪುರದಲ್ಲಿ ಒಟ್ಟು 5 ವಿಧಾನಸಭಾ ಸ್ಥಾನಗಳಿವೆ. ಕಾಂಗ್ರೆಸ್‌ನ ಹಿರಿಯ ನಾಯಕ ಸಂಜಯ್ ಸಿಂಗ್ ಅವರು ಬಿಜೆಪಿ ನಾಯಕಿ ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿಯವರೊಂದಿಗೆ ಚುನಾವಣೆಯಲ್ಲಿ ಗೆಲ್ಲುವ ವಿಚಾರದಲ್ಲಿ ದೀರ್ಘಕಾಲದಿಂದಲೂ ಸಂಘರ್ಷ ನಡೆಸುತ್ತಿದ್ದಾರೆ.
ಹಲವು ಬಾರಿ ಮೊಕದ್ದಮೆಗಳೂ ದಾಖಲಾಗಿವೆ. ಮನೇಕಾ ಗಾಂಧಿ ಪಶುವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ಇಲ್ಲಿನ ಪ್ರಮುಖ ಸುದ್ದಿಯಾಗಿದೆ. ಚುನಾವಣಾ ಆಯೋಗವು ಮೇನಕಾ ಗಾಂಧಿ ಅವರ ಹೇಳಿಕೆಗಳಿಗೆ ನೋಟಿಸ್ ನೀಡಿತ್ತು. ಈ ವಿವಾದಗಳ ನಡುವೆಯೇ ಮನೇಕಾ ಗಾಂಧಿ ವ್ಯಕ್ತಿತ್ವ ಬಹಳ ಶಾರ್ಪ್ ಆಗಿದೆ ಎನ್ನುವ ವಾತಾವರಣ ನಿರ್ಮಾಣವಾಗಿದ್ದು, ಇದ್ರ ಎಫೆಕ್ಟ್ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಲಿದೆ ಎನ್ನಲಾಗುತ್ತಿದೆ.
ಲಖನೌದಲ್ಲಿ ಹಗ್ಗ-ಜಗ್ಗಾಟ:ರಾಜಧಾನಿ ಲಖನೌ ರಾಜಕೀಯದ ಕೇಂದ್ರವೂ ಆಗಿದೆ. ಇಲ್ಲಿನ ಐದು ವಿಧಾನಸಭಾ ಸ್ಥಾನಗಳಿಗೆ ಪ್ರತಿ ಬಾರಿ ಹಗ್ಗ ಜಗ್ಗಾಟ ನಡೆಯುತ್ತಲೇ ಇರುತ್ತದೆ. ಪ್ರಮುಖವಾಗಿ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆದಿವೆ.. ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಾಕಷ್ಟು ಚರ್ಚೆ ನಡೆದಿವೆ.