ನವದೆಹಲಿ/ಗ್ರೇಟರ್ ನೋಯ್ಡಾ: ಆನ್ಲೈನ್ ಪಬ್ಜಿ ಗೇಮಿಂಗ್ ವೇದಿಕೆಯಿಂದ ಪಾಕಿಸ್ತಾನಿ ಮಹಿಳೆ ಭಾರತದ ಯುವಕನ ಪರಿಚಯ ಮಾಡಿಕೊಂಡು, ಇಲ್ಲಿಗೆ ಬಂದು ವಾಸಿಸಿ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪ್ರಸ್ತುತ ಆಕೆ ಮತ್ತು ಆಕೆಯ ಭಾರತ ಸ್ನೇಹಿತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗ್ರೇಟರ್ ನೋಯ್ಡಾದ ರಬೂಪುರದ ಯುವಕನೊಂದಿಗೆ ಪಾಕಿಸ್ತಾನಿ ಮಹಿಳೆ ವಾಸಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ರಬೂಪುರ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಿದ್ದಾರೆ. ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಗ್ರೇಟರ್ ನೋಯ್ಡಾಗೆ ಬಂದಿದ್ದಳು. ರಬುಪುರ ನಿವಾಸಿ ಸಚಿನ್ ಜೊತೆ ಪತ್ನಿಯಾಗಿ ಇಲ್ಲಿ ವಾಸಿಸುತ್ತಿದ್ದಳು. ಆಕೆಯ ಬಗ್ಗೆ ಅನುಮಾನ ಬಂದು ಭದ್ರತಾ ಸಂಸ್ಥೆಗಳು ವಿಚಾರಣೆ ನಡೆಸಿದಾಗ ಪಾಕಿಸ್ತಾನ ಮೂಲ ಎಂದು ತಿಳಿದುಬಂದಿದೆ.
ರಬುಪುರದಲ್ಲಿ ಪಾಕಿಸ್ತಾನಿ ಮಹಿಳೆ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ. ಮಾಹಿತಿ ಪಡೆದ ತಕ್ಷಣ ಪೊಲೀಸ್ ತಂಡವನ್ನು ರಚಿಸಿ, ಗುಪ್ತಚರ, ಎಲೆಕ್ಟ್ರಾನಿಕ್ ಕಣ್ಗಾವಲು, ಬೀಟ್ ಪೊಲೀಸಿಂಗ್ ಸಹಾಯದಿಂದ ಪಾಕಿಸ್ತಾನಿ ಮಹಿಳೆಯನ್ನು ಪತ್ತೆಹಚ್ಚಿದ್ದಾರೆ. ಆಕೆಯ ಹೆಸರು ಸೀಮಾ ಗುಲಾಮ್ ಹೈದರ್ ಎಂಬ ಪ್ರಾಥಮಿಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ವಿವರವಾದ ಮಾಹಿತಿ ನೀಡಲಾಗುವುದು ಎಂದು ಗ್ರೇಟರ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸಚಿನ್ ಎಂಬ ಯುವಕ ಪಾಕಿಸ್ತಾನಿ ಮಹಿಳೆಯೊಂದಿಗೆ ಬಾಡಿಗೆಗೆ ಕೊಠಡಿ ತೆಗೆದುಕೊಂಡು ವಾಸಿಸುತ್ತಿದ್ದ. ಇಬ್ಬರೂ ಪಬ್ಜಿ (PUBG) ಮೊಬೈಲ್ ಗೇಮ್ನಿಂದ ಪರಿಚಯ ಆಗಿದ್ದರು. ನಂತರ ಆನ್ಲೈನ್ನಲ್ಲಿ ಸ್ನೇಹ ನಿಕಟವಾಗಿ ಬೆಳೆದ ನಂತರ ಆಕೆಯನ್ನು ಸಚಿನ್ ನೇಪಾಳದಲ್ಲಿ ಮೊದಲು ಭೇಟಿಯಾಗಿದ್ದಾನೆ. ಇದಾದ ಬಳಿಕ ವಿಮಾನದ ಮೂಲಕ ನೇಪಾಳಕ್ಕೆ ಬಂದ ಮಹಿಳೆ ನಂತರ ಬಸ್ಸಿನಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಉತ್ತರ ಪ್ರದೇಶಕ್ಕೆ ಬಂದಿದ್ದಾಳೆ.