ನವದೆಹಲಿ: ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಕುಮಾರ್ ಅವರ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸುಶೀಲ್ ಕುಮಾರ್ ಸದ್ಯ ಉತ್ತರಾಖಂಡ್ನಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಹುಡುಕಾಟ ಆರಂಭಿಸಿದ್ದಾರೆ.
ಕುಸ್ತಿಪಟು ಸಾಗರ್ ಕುಮಾರ್ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಸುಶೀಲ್ 10 ದಿನಗಳಿಂದ ತಲೆ ಮರೆಸಿಕೊಂಡಿದ್ದಾರೆ. ಇಲ್ಲಿಯವರೆಗೆ ಪೊಲೀಸರಿಗೆ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಒಲಿಂಪಿಕ್ ಪದಕ ವಿಜೇತರಾಗಿದ್ದ ಸುಶೀಲ್ ಅವರು ಉತ್ತರಾಖಂಡದಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿ ಬಂದಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಮೇ 4 ರಂದು ಚತ್ರಸಲ್ ಕ್ರೀಡಾಂಗಣದಲ್ಲಿ ಎರಡು ಕುಸ್ತಿಪಟುಗಳ ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ಜಗಳದಲ್ಲಿ ಗಾಯಗೊಂಡಿದ್ದ ಸಾಗರ್ನನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಾಗರ್ ಕಿರಿಯ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಮುಖ್ಯ ಆರೋಪಿ ಎನ್ನಲಾಗಿದ್ದು, ಈತ ಸದ್ಯ ತಲೆಮರೆಸಿಕೊಂಡಿದ್ದಾರೆ. ಉತ್ತರಾಖಂಡ್ನ ಬಾಬಾ ಆಶ್ರಮದಲ್ಲಿ ಸುಶೀಲ್ ಆಶ್ರಯ ಪಡೆದಿದ್ದಾರೆ ಎನ್ನಲಾಗಿದ್ದು, ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಪೊಲೀಸರು ಸುಶೀಲ್ ವಿರುದ್ಧ ಹಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆದ್ದರಿಂದ ಸುಶೀಲ್ ಬಂಧನ ಖಚಿತವಾಗಿದೆ. ಇನ್ನು ಸ್ಟೇಡಿಯಂನಲ್ಲಿ ಗಾಯಗೊಂಡ ಸೋನು ಎಂಬುವವರು ಹೇಳಿಕೆಯಲ್ಲಿ ಸುಶೀಲ್ ತನ್ನನ್ನು ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಆರೋಪಿಗಳ ಮೊಬೈಲ್ನಲ್ಲಿ ಕುಸ್ತಿಪಟುವನ್ನು ಹೊಡೆದ ವಿಡಿಯೋ ಕೂಡ ಪತ್ತೆಯಾಗಿದೆ. ಪ್ರಕರಣ ಸಂಬಂಧ ಸುಶೀಲ್ ಆಪ್ತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.