ಪಲಾಮು (ಜಾರ್ಖಂಡ್): ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೋರ್ವ ಅತ್ತೆ ಮತ್ತು ಮಾವನ ವಿರುದ್ಧ ಸಿನಿಮೀಯ ಕಥೆ ಕಟ್ಟಿ ಇದೀಗ ತಾನೇ ಜೈಲು ಪಾಲಾಗಿರುವ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ.
ಹೌದು, ವ್ಯಕ್ತಿಯೋರ್ವ ತನ್ನ ಕುಟುಂಬದವರೊಂದಿಗೆ ಸೇರಿಕೊಂಡು ತನ್ನದೇ ಅಪಹರಣ ಮತ್ತು ಕೊಲೆಯ ಕತೆ ರೂಪಿಸಿದ್ದ. ಇದೇ ಪ್ರಕರಣದಲ್ಲಿ ಅತ್ತೆ ಮತ್ತು ಮಾವನ ಕಡೆಯವನ್ನು ಪೊಲೀಸರು ಬಂಧಿಸಿದ್ದರು. ಅಪಹರಣ ಆರೋಪ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಇನ್ನೂ ಜೈಲಿನಲ್ಲೇ ಇದ್ದಾನೆ. ಆದರೆ, ಇದೀಗ ಇದೊಂದು ಸುಳ್ಳು ಮತ್ತು ಕಟ್ಟು ಕಥೆ ಎಂಬುವುದು ಬಯಲಾಗಿದೆ.
ಈ ಕಟು ಕತೆಯ ಸೂತ್ರಧಾರಿಯಾದ ನವಾ ಬಜಾರ್ ಗ್ರಾಮದ ನಿವಾಸಿ ರಾಮಮಿಲನ್ ಚೌಧರಿ ಅಲಿಯಾಸ್ ಚುನಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 2016ರಲ್ಲಿ ರಾಮಮಿಲನ್ ಚೌಧರಿ ತನ್ನ ಪತ್ನಿ ಸರಿತಾ ದೇವಿ ಮೇಲೆ ಹಲ್ಲೆ ಮಾಡಿ, ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ವಿಚಾರವಾಗಿ ಸರಿತಾ ದೇವಿ ಪೊಲೀಸರ ಮೊರೆ ಹೋಗಿದ್ದರು. ಇದೇ ಸಂದರ್ಭದಲ್ಲಿ ರಾಮಮಿಲನ್ ಚೌಧರಿ ನಾಪತ್ತೆಯಾಗಿದ್ದರು.
ಇತ್ತ, ಇದೇ ವೇಳೆ ರಾಮಮಿಲನ್ ಚೌಧರಿಯನ್ನು ಅತ್ತೆ ಮತ್ತು ಮಾವನ ಕಡೆಯವರೇ ಅಪಹರಿಸಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದರು. ಜೊತೆಗೆ ಅತ್ತೆಯ ಮನೆಯವರೇ ರಾಮಮಿಲನ್ ಚೌಧರಿಯ ಕೊಲೆ ಮಾಡಿದ್ದಾರೆ ಎಂದೂ ದೂರಿದ್ದರು.
ರಾಮಮಿಲನ್ ಚೌಧರಿ ಕುಟುಂಬಸ್ಥರ ದೂರಿನ ಮೇರೆಗೆ ಅಪಹರಣ ಆರೋಪದ ಮೇಲೆ ಅತ್ತೆ ಕಲಾವತಿ ದೇವಿ, ಮಾವ ರಾಧಾ ಚೌಧರಿ, ಗ್ರಾಮಸ್ಥರಾದ ಕುದ್ರತ್ ಅನ್ಸಾರಿ ಮತ್ತು ಲಲನ್ ಮಿಸ್ತ್ರಿ ಸೇರಿ ಐವರನ್ನು ಅವರನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಕುದ್ರತ್ ಅನ್ಸಾರಿ ಇನ್ನೂ ಜೈಲಿನಲ್ಲಿದ್ದಾರೆ.
ಆದರೆ, ಕೆಲವು ದಿನಗಳ ಹಿಂದೆ ರಾಮಮಿಲನ್ ಚೌಧರಿ ಜೀವಂತವಾಗಿದ್ದಾರೆ ಎಂಬ ಮಾಹಿತಿ ಅತ್ತೆ ಮತ್ತು ಮಾವನ ಕಡೆಯವರಿಗೆ ಸಿಕ್ಕಿದೆ. ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ನಂತರ ಪೊಲೀಸರು ರಾಮಮಿಲನ್ ಚೌಧರಿಯನ್ನು ಹಿಡಿಯಲು ನಿರಂತರ ಪ್ರಯತ್ನ ನಡೆಸಿದ್ದು, ಸದ್ಯ ಛತ್ತರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೃಷಿಕೇಶ್ ಕುಮಾರ್ ರೈ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಕಿಗೆ ಕಿರುಕುಳ ಆರೋಪ: ಯುವಕನ ಕೈಕಾಲು ಕಟ್ಟಿ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ ಹಿಂಸೆ