ಫಿರೋಜ್ಪುರ (ಪಂಜಾಬ್): ಪಂಜಾಬ್ನ ಫಿರೋಜ್ಪುರ ಜಿಲ್ಲೆಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ರೊಬ್ಬರು ಮಹಿಳಾ ಕಾನ್ಸ್ಟೇಬಲ್ಗೆ ಗುಂಡಿಕ್ಕಿ ಹತ್ಯೆಗೈದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಯಾದ ಮಹಿಳಾ ಕಾನ್ಸ್ಟೇಬಲ್ ಅವರನ್ನು ಅಮನ್ದೀಪ್ ಕೌರ್ ಎಂದು ಗುರುತಿಸಲಾಗಿದೆ. ಈ ಕೊಲೆ ನಂತರ ಕಾನ್ಸ್ಟೇಬಲ್ ಗುರುಸೇವಕ್ ಸಿಂಗ್ ಎಂಬಾತನೇ ಆತ್ಮಹತ್ಯೆಗೆ ಶರಣಾದವರು.
ಫಿರೋಜ್ಪುರದ ಶೇರ್ ಷಾ ವಾಲಿ ಪೀರ್ ಚೌಕ್ನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಹತ್ಯೆಯಾದ ಅಮನ್ದೀಪ್ ಕೌರ್ ಕಂಟೋನ್ಮೆಂಟ್ ಫಿರೋಜ್ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಲವಾಂಡಿ ಭಾಯ್ ಚೌಕ್ ಪೊಲೀಸ್ ಠಾಣೆಯಲ್ಲಿ ಗುರುಸೇವಕ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ಏಕಾಏಕಿ ಬಂದು ಅಮನ್ದೀಪ್ ಕೌರ್ರನ್ನು ಗುರುಸೇವಕ್ ಸಿಂಗ್ ಹತ್ಯೆ ಮಾಡಿದ್ದಾರೆ.
ಇಷ್ಟಕ್ಕೂ ನಡೆದಿದ್ದೇನು?: ಶನಿವಾರ ತಡರಾತ್ರಿ ಮಹಿಳಾ ಕಾನ್ಸ್ಟೇಬಲ್ ಅಮನ್ದೀಪ್ ಕೌರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಸ್ಕೂಟಿ ಮೇಲೆ ತೆರಳುತ್ತಿದ್ದ ಅಮನ್ದೀಪ್ ಕೌರ್ ಶೇರ್ ಶಾ ವಾಲಿ ಪೀರ್ ಚೌಕ್ಗೆ ತಲುಪಿದಾಗ ಗುರುಸೇವಕ್ ಸಿಂಗ್ ಕಾರಿನಲ್ಲಿ ಬಂದಿದ್ದಾರೆ. ಆಗ ಮೊದಲಿಗೆ ಗುರುಸೇವಕ್ ಸಿಂಗ್, ಅಮನ್ದೀಪ್ ಕೌರ್ ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಹೊಡೆದಿದ್ದಾರೆ. ನಂತರ ಕಾರಿನಿಂದ ಕೆಳಗಿಳಿದು ಅಮನ್ದೀಪ್ ಕೌರ್ ಮೇಲೆ ಗುರುಸೇವಕ್ ಸಿಂಗ್ ಐದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಾದ ಬಳಿಕ ಆರೋಪಿ ಗುರುಸೇವಕ್ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಂದೆಡೆ, ಗುಂಡೇಟು ತಿಂದು ನೆಲಕ್ಕೆ ಬಂದಿದ್ದ ಅಮನ್ದೀಪ್ ಕೌರ್ ಅವರನ್ನು ಸ್ಥಳೀಯರು ಗಮನಿಸಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಅಮನ್ದೀಪ್ ಕೌರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನೊಂದೆಡೆ, ಪೊಲೀಸ್ ಪೇದೆ ಗುರುಸೇವಕ್ ಸಿಂಗ್ ತಲವಾಂಡಿ ಚೌಕ್ಗೆ ತೆರಳಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರಣ ನಿಗೂಢ:ಪೊಲೀಸ್ ಕಾನ್ಸ್ಟೇಬಲ್ ಗುರುಸೇವಕ್ ಸಿಂಗ್, ತಮ್ಮ ಸಹೋದ್ಯೋಗಿಯಾದ ಅಮನ್ದೀಪ್ ಕೌರ್ ಅವರನ್ನು ಕೊಲೆ ಮಾಡಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಗುರುಸೇವಕ್ ಸಿಂಗ್ 2011ರಲ್ಲಿ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದ್ದರು. ಅಲ್ಲದೇ, ಈಗಾಗಲೇ ಮದುವೆಯಾಗಿದ್ದ ಗುರುಸೇವಕ್ ಸಿಂಗ್ಗೆ ಒಂದು ಮಗು ಕೂಡ ಇದೆ. ಅಮನ್ದೀಪ್ ಕೌರ್ ಮತ್ತು ಗುರುಸೇವಕ್ ಸಿಂಗ್ ನಡುವೆ ಏನು ಸಂಬಂಧ ಹಾಗೂ ಈ ಘಟನೆ ಕಾರಣವೇನು ಎಂಬುದು ನಿಗೂಢವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ನವೀನ್ ಕುಮಾರ್, ಮಹಿಳಾ ಕಾನ್ಸ್ಟೇಬಲ್ ಅಮನ್ದೀಪ್ ಕೌರ್ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಗುರುಸೇವಕ್ ಸಿಂಗ್ ಹತ್ಯೆ ಮಾಡಿದ್ದಾರೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಘಟನೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಇಬ್ಬರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಿದ ASI: ಆರೋಗ್ಯ ಪರಿಸ್ಥಿತಿ ಚಿಂತಾಜನಕ