ಪುಣೆ (ಮಹಾರಾಷ್ಟ್ರ): ಬಾಲಕಿಯ ವಿಚಾರವಾಗಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದ 14 ವರ್ಷದ ಬಾಲಕನ ವಿರುದ್ಧ ಪೋಕ್ಸೋ ಮತ್ತು ಕಿರುಕುಳ ಆರೋಪದಡಿ ಮಹಾರಾಷ್ಟ್ರದ ಪುಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ.
ಇಲ್ಲಿನ ಹಡಪ್ಸರ್ ಪ್ರದೇಶದ ಪ್ರತಿಷ್ಠಿತ ಶಾಲೆಯಲ್ಲಿ 13 ವರ್ಷದ ಬಾಲಕಿ ಮತ್ತು ಆರೋಪಿ ಬಾಲಕ ಓದುತ್ತಿದ್ದಾರೆ. ಇತ್ತೀಚೆಗೆ ಬಾಲಕಿಯ ಫೋಟೋವೊಂದು ತೆಗೆದುಕೊಂಡು ಆರೋಪಿ ಬಾಲಕ 'ನೀನು ನನ್ನ ಹೆಂಡತಿಯಾಗಬಹುದೇ' (Will you be my wife) ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಬಾಲಕಿಯ ತಾಯಿ ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.