ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನಿಂದ ರಕ್ಷಣೆಗಾಗಿ ಮತ್ತೊಂದು ಹಂತದ ಲಸಿಕೆ ವಿತರಣೆಗೆ ಬುಧವಾರ ಚಾಲನೆ ಸಿಕ್ಕಿದೆ. ದೇಶದಾದ್ಯಂತ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಜತೆಗೆ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಸಹ ಕೊಡಲಾಗುತ್ತಿದ್ದು, ಮೊದಲ ದಿನ ಎಲ್ಲೆಡೆ ಮಕ್ಕಳು ಮತ್ತು ಹಿರಿಯರು ಲಸಿಕೆ ಪಡೆಯುತ್ತಿದ್ದಾರೆ.
2021ರ ಜನವರಿ 16ರಂದು ದೇಶದಲ್ಲಿ ಮೊದಲ ಬಾರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿತ್ತು. ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಶುರು ಮಾಡಲಾಗಿತ್ತು. ಈಗ ಲಸಿಕೆ ವಿತರಣೆಯಲ್ಲಿ ಭಾರತ ಮೈಲಿಗಲ್ಲು ಸ್ಥಾಪಿಸಿದೆ. ಇದುವರೆಗೆ 180 ಕೋಟಿಗೂ ಅಧಿಕ ಡೋಸ್ ಲಸಿಕೆ ಕೊಡಲಾಗಿದೆ. ಇದರಲ್ಲಿ 15-17 ವರ್ಷದೊಳಗಿನ ಹರಿಹರೆಯದವರಿಗೆ 9 ಕೋಟಿ ಡೋಸ್ ಸಹ ಸೇರಿದ್ದು, ಈಗ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ.
ಲಸಿಕೆ ವಿತರಣೆ ಕುರಿತಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಕೋವಿಡ್ ಲಸಿಕೆ ವಿತರಣೆಯ ಭಾರತ ಪ್ರಯತ್ನದಲ್ಲಿ ಇವತ್ತು ಮಹತ್ವದ ದಿನ. 12-14 ವರ್ಷದೊಳಗಿನ ಯುವ ಸಮುದಾಯ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೇ, 60 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಹೀಗಾಗಿ ನಾನು ಸಾರ್ವಜನಿಕರಿಗೆ ಲಸಿಕೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.