ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಎರಡನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೆಲ ಚಾಲನೆ ನೀಡಲಿದ್ದಾರೆ.
ಮೆಟ್ರೋ ಯೋಜನೆಗಳು ಗುಜರಾತ್‌ನ ಎರಡೂ ನಗರಗಳಿಗೆ ಪರಿಸರ ಸ್ನೇಹಿ ಮತ್ತು ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿವೆ ಎಂದು ಪ್ರಧಾನಿ ಕಚೇರಿ ಶನಿವಾರ ತಿಳಿಸಿದೆ.
ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಹಂತ -2 ರಲ್ಲಿ 28.25 ಕಿ.ಮೀ. ಎರಡು ಕಾರಿಡಾರ್‌ಗಳಿದ್ದು 22.8 ಕಿ.ಮೀ ಉದ್ದದ ಕಾರಿಡಾರ್ -1 ಮೊಟೆರಾ ಕ್ರೀಡಾಂಗಣದಿಂದ ಮಹಾತ್ಮ ಮಂದಿರವರೆಗೆ ಮತ್ತು 5.4 ಕಿ.ಮೀ ಉದ್ದದ ಕಾರಿಡಾರ್- 2 ಜಿಎನ್‌ಎಲ್‌ಯುನಿಂದ ಜಿಐಎಫ್ಟಿ ಸಿಟಿವರೆಗೆ ಇದೆ. ಎರಡನೇ ಹಂತದ ಮೆಟ್ರೋ ಯೋಜನಗೆ ಅಂದಾಜು 5,384 ಕೋಟಿ ರೂ. ತಗುಲಲಿದೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೂರತ್ ಮೆಟ್ರೋ ರೈಲು ಯೋಜನೆ 40.35 ಕಿ.ಮೀ ಉದ್ದವಿದ್ದು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. 21.61 ಕಿ.ಮೀ ಉದ್ದದ ಕಾರಿಡಾರ್ -1 ಸರ್ತಾನಾದಿಂದ ಡ್ರೀಮ್ ಸಿಟಿಯವರೆಗೆ ಇದ್ದರೆ, 18.74 ಕಿ.ಮೀ ಉದ್ದದ ಕಾರಿಡಾರ್- 2 ಭೆಸಾನ್ ನಿಂದ ಸರೋಲಿ ವರೆಗೆ ಇದೆ. ಯೋಜನೆಯ ಪೂರ್ಣಗೊಳ್ಳಲು ಅಂದಾಜು12,020 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದೆ.