ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ, ಭಾರತದಲ್ಲಿ ಕೊರೊನಾ ಲಸಿಕಾ ಅಭಿಯಾನದ ವೇಗ ಸೇರಿದಂತೆ ಕೆಲವೊಂದು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿನ ಲಸಿಕಾ ವೇಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದರಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಕಳೆದ ಆರು ದಿನಗಳಲ್ಲಿ 37 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ನಮೋ ಉನ್ನತ ಮಟ್ಟದ ಸಭೆ
ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನದಲ್ಲಿ ಭಾಗಿಯಾಗಲು ಹಾಗೂ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಘಟನೆಗಳು ಇದರಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ. ಸದ್ಯ ದೇಶದಲ್ಲಿ ನಡೆಯುತ್ತಿರುವ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ನಲ್ಲಿ ಯಾವುದೇ ರೀತಿಯ ಕುಂಠಿತ ಉಂಟಾಗಬಾರದು ಎಂದಿರುವ ನಮೋ, ಟೆಸ್ಟ್ನಲ್ಲೂ ಯಾವುದೇ ರೀತಿಯ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಇತಿಹಾಸ ಸೃಷ್ಟಿಸಿದ ಪ್ರಕಾಶ್.. ಒಲಿಂಪಿಕ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟು!
ಕೋವಿಡ್ ಲಸಿಕಾಭಿಯಾನಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಅಧಿಕಾರಿಗಳು ಬೇರೆ ಬೇರೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ನಮೋ ಸೂಚನೆ ಸಹ ನೀಡಿದ್ದಾರೆಂದು ತಿಳಿದು ಬಂದಿದೆ. ಇದೇ ವೇಳೆ ದೇಶದಲ್ಲಿ ಆತಂಕ ಸೃಷ್ಟಿ ಮಾಡಿರುವ ಡೆಲ್ಟಾ ಪ್ಲಸ್ ರೂಪಾಂತರಿ ಬಗ್ಗೆ ಸಹ ಚರ್ಚೆ ನಡೆಸಲಾಗಿದ್ದು, ಹೆಚ್ಚಿನ ಟೆಸ್ಟ್ ನಡೆಸುವಂತೆ ಸಲಹೆ ನೀಡಿದ್ದಾಗಿ ವರದಿಯಾಗಿದೆ. ಸೋಂಕು ತಡೆಗಟ್ಟಲು ವ್ಯಾಕ್ಸಿನ್ ಡ್ರೈವ್ಗೆ ವೇಗ ನೀಡುವಂತೆ ತಿಳಿಸಿದ್ದಾರೆ.