ನವದೆಹಲಿ:ಕರ್ನಾಟಕ ಜಾನಪದ ಶೈಲಿಯ "ಲಾಲಿ ಹಾಡು" ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮಾಸಿಕ ಕಾರ್ಯಕ್ರಮ ಮನ್ ಕೀ ಬಾತ್ನಲ್ಲಿಂದು ಪ್ರತಿಧ್ವನಿಸಿತು. ಚಾಮರಾಜನಗರದ ಬಿ.ಎಂ.ಮಂಜುನಾಥ್ ಬರೆದ ಸುಂದರ ಗೀತೆ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಬಾಚಿಕೊಂಡಿದೆ. "ಮಲಗು ಕಂದ" ಹಾಡನ್ನು ಮನ್ ಕೀ ಬಾತ್‌ನಲ್ಲಿ ಪ್ರಸಾರ ಕೂಡ ಮಾಡಲಾಯಿತು.
ತಾಯಿ ಮತ್ತು ಅಜ್ಜಿಯ ಪ್ರೇರಣೆಯಿಂದ ಪದಗಳಲ್ಲಿ ಮೂಡಿಬಂದ ಭಾವ ತುಂಬಿದ್ದ 35 ಸೆಕೆಂಡುಗಳ ಲಾಲಿ ಹಾಡು ಹೃದಯಸ್ಪರ್ಶಿಯಾಗಿತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಇದಲ್ಲದೇ, ಅಸ್ಸಾಂನ ದಿನೇಶ್ ಗೋವಾಲಾ ಅವರ ವಿರಚಿತ ಮಡಕೆ ಕುಶಲಕರ್ಮಿಗಳ ಪ್ರತಿಬಿಂಬಿಸುವ ಹಾಡು, ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರೀಕೃತ ಆಂಧ್ರಪ್ರದೇಶದ ಟಿ.ವಿಜಯ್ ದುರ್ಗಾ ಅವರು ಬರೆದ ಹಾಡನ್ನೂ ಪ್ರಧಾನಿಗಳು ಮೆಚ್ಚುಗೆ ಸೂಚಿಸಿದರು.
ಯುಪಿಐ, ಇ-ಸಂಜೀವನಿ ಆ್ಯಪ್:ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ವ್ಯವಸ್ಥೆ ಮತ್ತು ಇ ಸಂಜೀವಿನಿ ಆ್ಯಪ್ ಡಿಜಿಟಲ್ ಇಂಡಿಯಾದ ಶಕ್ತಿಗೆ ಉಜ್ವಲ ಉದಾಹರಣೆಯಾಗಿದೆ. ವಿಶ್ವದ ಹಲವು ದೇಶಗಳು ಭಾರತದ UPI ಗೆ ಆಕರ್ಷಿತವಾಗಿವೆ ಎಂದು ಪ್ರಧಾನಿ ಹೇಳಿದರು.
"ಪ್ರಪಂಚದ ಹಲವು ದೇಶಗಳು ಭಾರತದ ಯುಪಿಐ ಕಡೆಗೆ ಸೆಳೆಯಲ್ಪಟ್ಟಿವೆ. ಕೆಲವೇ ದಿನಗಳ ಹಿಂದೆ ಭಾರತ ಮತ್ತು ಸಿಂಗಾಪುರದ ನಡುವೆ UPI-PayNow ಲಿಂಕ್ ಅನ್ನು ಪ್ರಾರಂಭಿಸಲಾಗಿದೆ. ಈಗ, ಸಿಂಗಾಪುರ ಮತ್ತು ಭಾರತದ ಜನರು ತಮ್ಮ ಮೊಬೈಲ್ನಿಂದ ಹಣವನ್ನು ವರ್ಗಾಯಿಸುತ್ತಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ ಹಣಕಾಸಿನ ವ್ಯವಹಾರ ನೇರವಾಗಿ ಆರಂಭವಾಗಿದೆ" ಎಂದು ಅವರು ಹೇಳಿದರು.
ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಇ-ಸಂಜೀವಿನಿ ಆ್ಯಪ್ ಜನರಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ಇದು ಡಿಜಿಟಲ್ ಇಂಡಿಯಾದ ಭವ್ಯ ಕನಸಿಗೆ ಜ್ವಲಂತ ಉದಾಹರಣೆಯಾಗಿದೆ. ಈ ಆ್ಯಪ್ ಮೂಲಕ ಟೆಲಿ ಕನ್ಸಲ್ಟೇಶನ್ ಅಂದರೆ ದೂರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾರೋಗ್ಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಬಹುದು. ಇಲ್ಲಿಯವರೆಗೆ ಈ ಆ್ಯಪ್ ಬಳಸುವ ಟೆಲಿ ಕನ್ಸಲ್ಟೆಂಟ್ಗಳ ಸಂಖ್ಯೆ 10 ಕೋಟಿ ದಾಟಿದೆ. ರೋಗಿಯ ಮತ್ತು ವೈದ್ಯರನ್ನು ದೂರದಿಂದಲೇ ಹತ್ತಿರಕ್ಕೆ ತರುವ ದೊಡ್ಡ ತಂತ್ರಜ್ಞಾನವಾಗಿದೆ ಎಂದು ಶ್ಲಾಘಿಸಿದರು.