ನವದೆಹಲಿ:ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸವಾಲುಗಳನ್ನು ಎದುರಿಸಲು ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. ಪಕ್ಷದ 44 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಹನುಮಾನ್ ಜಯಂತಿ ಮತ್ತು ಪಕ್ಷದ ಸಂಸ್ಥಾಪನಾ ದಿನವಾಗಿದೆ. ಹನುಮನಂತೆ ನಿಸ್ವಾರ್ಥ ಸೇವೆಯನ್ನು ಪಕ್ಷ ಮಾಡುತ್ತದೆ. ಎಲ್ಲ ದಾರ್ಷ್ಟ್ಯವನ್ನು ತೊಡೆದು ಹಾಕಿದ ನಂತರ ದೇಶ ಕೂಡ ಭಗವಾನ್ ಹನುಮಂತನಂತೆ ಬಲಾಢ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
"ಭಗವಾನ್ ಹನುಮಂತನು ತನ್ನ ಸಂಪೂರ್ಣ ಜೀವನದಲ್ಲಿ ಯಾವುದನ್ನಾದರೂ ಮಾಡಬಲ್ಲೆನು ಎಂಬ ಮನೋಭಾವ ಹೊಂದಿದ್ದ. ಅದು ದೊಡ್ಡ ಯಶಸ್ಸು ಸಾಧಿಸಲು ಸಹಾಯ ಮಾಡಿತು. ಅದರಂತೆ ನಾವು ಕೂಡ ಎಲ್ಲವನ್ನೂ ಸಾಧಿಸುತ್ತೇವೆ ಎಂಬ ಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಹನುಮ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಉಚಿತ ಪಡಿತರ ಯೋಜನೆ, ಆರೋಗ್ಯ ವಿಮೆ ಮತ್ತು ಇತರ ಉತ್ತಮ ಯೋಜನೆಗಳನ್ನು ಇದೇ ವೇಳೆ ಮೋದಿ ಉಲ್ಲೇಖಿಸಿ ಸಾಮಾಜಿಕ ನ್ಯಾಯವು ಬಿಜೆಪಿಗೆ ನಂಬಿಕೆಯಾಗಿದೆ ಎಂದು ಪ್ರತಿಪಾದಿಸಿದರು.
ವಿರೋಧ ಪಕ್ಷಗಳು ದೊಡ್ಡದಾಗಿ ಯೋಚಿಸಲು ಸಾಧ್ಯವಿಲ್ಲ. ಸಣ್ಣತನದಿಂದಲೇ ಅವರು ತೃಪ್ತರಾಗಿದ್ದಾರೆ ಎಂದು ಆರೋಪಿಸಿದ ಪ್ರಧಾನಿ, "ಬಿಜೆಪಿ ದೊಡ್ಡ ಕನಸುಗಳನ್ನು ಮತ್ತು ಇನ್ನೂ ದೊಡ್ಡ ಗುರಿಗಳನ್ನು ಸಾಧಿಸಲು ಯೋಜಿಸುತ್ತದೆ. 2014 ರಿಂದ ನಮ್ಮ ಸರ್ಕಾರ ಬಡವರು, ಹಿಂದುಳಿದವರು ಮತ್ತು ವಂಚಿತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಾಶ್ಮೀರಕ್ಕೆ ವಿಶೇಷಾಧಿಕಾರಿವನ್ನು ತೆಗೆದು ಹಾಕಿದ್ದು, ಇತಿಹಾಸವಾಗಲಿದೆ ಎಂದು ವಿರೋಧ ಪಕ್ಷಗಳು ಊಹಿಸಿರಲಿಲ್ಲ. ಬಿಜೆಪಿ ಮಾಡುತ್ತಿರುವ ಕೆಲಸವನ್ನು ಅವರು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ವಿಪಕ್ಷಗಳು ನನ್ನ ಸಾವನ್ನು ಕೂಡ ಬಯಸುತ್ತಿವೆ. ಇದು ಅವರ ಹತಾಶ ಮನೋಭಾವವನ್ನು ತೋರಿಸುತ್ತದೆ ಎಂದ ಮೋದಿ, ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉತ್ತಮ ರೀತಿಯಲ್ಲಿ ಬಳಸುವಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಲು ಪ್ರಧಾನಿ ಇದೇ ವೇಳೆ ಸಲಹೆ ನೀಡಿದರು.