ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 7 ರಂದು (ಬುಧವಾರ) ಶಾಲಾ -ಕಾಲೇಜು ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಸಂವಾದ ನಡೆಸಲಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಈ ವರ್ಷ ವರ್ಚುವಲ್ ಆಗಿ ಸಂವಾದ ನಡೆಯಲಿದೆ.
ವಿದ್ಯಾರ್ಥಿಗಳೊಂದಿಗೆ ಮೋದಿಯವರು ನಡೆಸುವ ವಾರ್ಷಿಕ ಸಂವಾದ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಹೊಸ ಸ್ವರೂಪದಲ್ಲಿ ನಡೆಸಲಾಗುವುದು ಪ್ರಧಾನಿ ತಿಳಿಸಿದ್ದಾರೆ.
ನಮ್ಮ ಕೆಚ್ಚೆದೆಯ ಪರೀಕ್ಷಾ ಯೋಧರು, ಪೋಷಕರು ಮತ್ತು ಶಿಕ್ಷಕರೊಂದಿಗೆ ವ್ಯಾಪಕ ವಿಷಯಗಳ ಕುರಿತು ಹಲವಾರು ಆಸಕ್ತಿದಾಯಕ ಪ್ರಶ್ನೆಗಳ ಜೊತೆಯಲ್ಲಿ ನಡೆಸುವ ಸ್ಮರಣೀಯ ಚರ್ಚೆ ಇದಾಗಿರಲಿದೆ. ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ವೀಕ್ಷಿಸಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ದೃಷ್ಟಿಯಿಂದ ಈ ವರ್ಷ ಆನ್ಲೈನ್ ಮೂಲಕ ನಾಲ್ಕನೇ ಆವೃತ್ತಿಯ ವಾರ್ಷಿಕ ಸಂವಾದ ನಡೆಸಲಾಗುವುದು ಎಂದು ಫೆಬ್ರವರಿಯಲ್ಲಿ ಪ್ರಕಟಿಸಲಾಗಿತ್ತು. ಪರೀಕ್ಷಾ ಪೆ ಚರ್ಚಾದ ಮೊದಲ ಆವೃತ್ತಿ 2018ರ ಫೆಬ್ರವರಿ 16ರಂದು ದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆದಿತ್ತು.