ಹೈದರಾಬಾದ್ (ತೆಲಂಗಾಣ):ಹೈದರಾಬಾದ್ಗೆ ಶನಿವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಾಬಾದ್ - ತಿರುಪತಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಿನ ಎರಡನೇ ವಂದೇ ಭಾರತ್ ರೈಲು ಇದಾಗಿದೆ. ಮೂರು ತಿಂಗಳ ಅಂತರದಲ್ಲಿ ಎರಡನೇ ಸೆಮಿ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭಗೊಂಡಿದೆ.
ಇದರ ಜೊತೆಗೆ ಇಂದು ಪ್ರಧಾನಿ ಮೋದಿ ಅವರು ಎರಡೂ ತೆಲುಗು ರಾಜ್ಯಗಳ ಜನರಿಗೆ ಅನುಕೂಲವಾಗುವಂತೆ 11,300 ಕೋಟಿ ರೂ.ಗಳ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. 1,350 ಕೋಟಿ ವೆಚ್ಚದ ರೂ. ವೆಚ್ಚದ ಎಐಐಎಂಎಸ್ ಬೀಬಿನಗರ ಮತ್ತು 7850 ಕೋಟಿ ರೂ. ಅಂದಾಜಿನ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇವು ಎರಡು ರಾಜ್ಯಗಳ ನಡುವೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಇದರ ಜೊತೆಗೆ 720 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿಕಂದರಾಬಾದ್ ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಗೂ ಇದೇ ವೇಳೆ ಚಾಲನೆ ನೀಡಲಿದ್ದಾರೆ.
ಇದನ್ನು ಓದಿ:ಹಿಂಡನ್ಬರ್ಗ್ ವರದಿ "ಉದ್ದೇಶಪೂರ್ವಕ": ಕಾಂಗ್ರೆಸ್ ಮಿತ್ರಪಕ್ಷ ನಾಯಕನ ಅಚ್ಚರಿಯ ಹೇಳಿಕೆ
ಪ್ರಯಾಣದ ಅವಧಿ ಕಡಿತ:ಸಿಕಂದರಾಬಾದ್ - ತಿರುಪತಿ ನಡುವೆ ಆರಂಭವಾಗಿರುವ ದೇಶದ 13 ನೇ ವಂದೇ ಭಾರತ್ ರೈಲು ಇದಾಗಿದ್ದು, ನಲ್ಗೊಂಡ, ಗುಂಟೂರು, ಒಂಗೋಲ್ ಮತ್ತು ನೆಲ್ಲೂರಿನಲ್ಲಿ ನಿಲುಗಡೆ ಹೊಂದಿದೆ. ಎರಡು ನಗರಗಳ ನಡುವೆ 660 ಕಿಮೀ ಅಂತರವನ್ನು ಇದು ಹೊಂದಿದೆ. ಎಕ್ಸ್‌ಪ್ರೆಸ್ ರೈಲಿನಿಂದ ಪ್ರಯಾಣದ ಸಮಯ ಸುಮಾರು ಮೂರೂವರೆ ಗಂಟೆಗಳಷ್ಟು ಕಡಿತವಾಗಲಿದೆ. ಒಂದು ನಿಮಿಷ ಅಥವಾ 52 ಸೆಕೆಂಡುಗಳಲ್ಲಿ 100 ಕಿಮೀ ವೇಗದಲ್ಲಿ ರೈಲು ಸಂಚಾರ ನಡೆಸಲಿದೆ.
ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಪವರ್ ಬ್ಯಾಕಪ್, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಗಳು ಮತ್ತು ವ್ಯಾಕ್ಯೂಮ್ ಟಾಯ್ಲೆಟ್‌ಗಳನ್ನು ಅಳವಡಿಸಲಾಗಿದೆ. ವಂದೇ ಭಾರತ್ ರೈಲು ಸಿಕಂದರಾಬಾದ್‌ನಿಂದ ತಿರುಪತಿಗೆ ಬೆಳಿಗ್ಗೆ 6 ಗಂಟೆಗೆ ಹೊರಟರೆ ಮಧ್ಯಾಹ್ನ 2:30 ಕ್ಕೆ ಗಮ್ಯಸ್ಥಾನ(ತಿರುಪತಿ) ತಲುಪುತ್ತದೆ. 8 ಗಂಟೆ 30 ನಿಮಿಷಗಳ ಪ್ರಯಾಣ ಅವಧಿ ಹೊಂದಿದೆ. ಇದರಿಂದ ತೆಲಂಗಾಣದಿಂದ ಹೊರಡುವ ಭಕ್ತರಿಗೆ ಭಾರಿ ಅನುಕೂಲ ಆಗಲಿದೆ.