ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಇಂದು (ಭಾನುವಾರ) ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 102ನೇ ಸಂಚಿಕೆಯಾಗಿದ್ದು, ಹಲವು ವಿಚಾರಗಳನ್ನು ಪ್ರಧಾನಿ ಮೋದಿ ಅವರು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಮೋದಿ ಅವರು ಮೊದಲ ಬಾರಿಗೆ ತಮ್ಮ ಆಲೋಚನೆ ಮತ್ತು ವಿಚಾರಗಳನ್ನು ಜನರೊಂದಿಗೆ ನೇರವಾಗಿ ಹಂಚಿಕೊಳ್ಳಲು ಮತ್ತು ಟಿವಿ, ಮೊಬೈಲ್ಗಳ ಭರಾಟೆಯ ನಡುವೆ ರೇಡಿಯೋವನ್ನು ಪುನರುಜ್ಜೀವನ ನೀಡಲು 2014ರ ಅ.3 ರಂದು ವಿಜಯ ದಶಮಿ ಸಂದರ್ಭದಲ್ಲಿ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ನಿರಂತರವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದೆ.
100 ಎಪಿಸೋಡ್ ಪೂರೈಕೆ:ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೋದ ಮನ್ ಕಿ ಬಾತ್ ಕಾರ್ಯಕ್ರಮ ಕಳೆದ ಮೇ 26 ರಂದು ಪ್ರಸಾರವಾಗಿತ್ತು. ಇದು 101ನೇ ಎಪಿಸೋಡ್ ಆಗಿತ್ತು. 9 ವರ್ಷಗಳಲ್ಲಿ ಇದು 100 ಕಂತುಗಳನ್ನು ಪೂರೈಸಿದೆ.
101 ರ ಕಂತಿನ ವಿಶೇಷ:ದೇಶದ ಒಂದು ಭಾಗದ ಯುವಕರು ಮತ್ತೊಂದು ಭಾಗಕ್ಕೆ ಪ್ರಯಾಣಿಸಿ ಅಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುವ 'ಯುವಸಂಗಮ ಯೋಜನೆ'ಯನ್ನು ಪ್ರಧಾನಿ ಶ್ಲಾಘಿಸಿದ್ದರು. ಯುವ ಸಂಗಮ್‌ನ ಮೊದಲ ಸುತ್ತಿನಲ್ಲಿ ಸುಮಾರು 1,200 ಯುವಕರು ದೇಶದ 22 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ. 'ಮನ್ ಕಿ ಬಾತ್' ನ 101 ನೇ ಸಂಚಿಕೆಯಲ್ಲಿ, 'ಯುವ ಸಂಗಮ'ದಲ್ಲಿ ಭಾಗಿಯಾಗಿರುವ ಕೆಲವರೊಂದಿಗೆ ಪ್ರಧಾನಿ ಸಂವಾದ ನಡೆಸಿ, ತಮ್ಮ ಅನುಭವಗಳನ್ನು ಆಧರಿಸಿದ ಬ್ಲಾಗ್ ಬರೆಯಬೇಕೆಂದು ಮನವಿ ಮಾಡಿದ್ದರು.