ವಾರಾಣಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ತಾವು ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಗೆ ಭರ್ಜರಿ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 23ರಂದು ವಾರಾಣಸಿಗೆ ಭೇಟಿ ನೀಡಲಿರುವ ಪಿಎಂ ಮೋದಿ, ಉತ್ತರ ಪ್ರದೇಶದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಗಂಜಾರಿ ನಗರದಲ್ಲಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕ್ರೀಡಾಂಗಣವು 30 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರಲಿವೆ. ಸೆಪ್ಟೆಂಬರ್ 23ರಂದು ಸ್ಟೇಡಿಯಂ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವು ಸ್ಟಾರ್ ಕ್ರಿಕೆಟಿಗರಿಗೆ ಆಹ್ವಾನ ನೀಡಲು ಕೂಡ ಸಿದ್ಧತೆ ನಡೆಸಲಾಗುತ್ತಿದೆ.
ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಬಿಸಿಸಿಐ ಆಯೋಜಿಸಲು ಯೋಜಿಸಿದೆ. ಈ ಕುರಿತಾಗಿ ಈಗಾಗಲೇ ಅಧಿಕಾರಿಗಳ ಸಭೆಯನ್ನೂ ನಡೆಸಿದೆ. ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಬಗ್ಗೆ ಖಚಿತಪಡಿಸಿರುವ ಆಯುಕ್ತ ಕೌಶಲ್ ರಾಜ್ ಶರ್ಮಾ, ಅಟಲ್ ಹೌಸಿಂಗ್ ವತಿಯಿಂದ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡುವುದರೊಂದಿಗೆ ಇತರ ಹಲವು ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
400 ಕೋಟಿ ರೂ. ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದರೊಂದಿಗೆ ಒಟ್ಟಾರೆ 1600 ಕೋಟಿ ರೂ.ಗಳ ಯೋಜನೆಗಳನ್ನು ವಾರಣಾಸಿಯ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡುತ್ತಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ. 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 16 ಅಟಲ್ ವಸತಿ ಶಾಲೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ ಎಂದು ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಅಟಲ್ ಆವಾಸ್ ಅಡಿಯಲ್ಲಿ ಪ್ರವೇಶ ಪಡೆಯುವ 80 ಮಕ್ಕಳ ಪೈಕಿ 40 ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಪಂಡಿತ್ ದೀನದಯಾಳ್ ಆಸ್ಪತ್ರೆಯಲ್ಲಿ ಹೈ ಡಿಪೆಂಡೆನ್ಸಿ ಯುನಿಟ್, ಶಿವಪುರದ ಔಷಧ ಗೋದಾಮು, ಫುಲ್ವಾರಿಯಾ ರಸ್ತೆ ಮಾರ್ಗ, ರಾಮನಗರದಲ್ಲಿ ಮಹಿಳಾ ಆಶ್ರಯ ಮನೆ ಮತ್ತು ವರುಣ ಪ್ರದೇಶದಲ್ಲಿ ಮನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೇ, ಮನೆಗಳಿಗೆ ನಳದ ಸಂಪರ್ಕ ಸೇರಿದಂತೆ ಇತರ ಯೋಜನೆಗಳು ಪೂರ್ಣಗೊಂಡಿವೆ. ಇವುಗಳ ಪಟ್ಟಿಯನ್ನೂ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ, ಆದರೆ ಈ ಯೋಜನೆಗಳನ್ನು ಪ್ರಧಾನಿ ಕಾರ್ಯಕ್ರಮದ ಪಟ್ಟಿಯಲ್ಲಿ ಸೇರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಇನ್ನೂ ಖಚಿತ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿಂದು ₹50,700 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ