ಗಾಂಧಿನಗರ (ಗುಜರಾತ್):ಪ್ರಧಾನಿ ನರೇಂದ್ರ ಮೋದಿ ಇಂದು ಮುಂಬೈ-ಗಾಂಧಿನಗರ 'ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್'ಗೆ ಚಾಲನೆ ನೀಡಲಿದ್ದಾರೆ. ಈ ರೈಲು ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಿಲ್ದಾಣಗಳ ನಡುವೆ ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
ವಿಶೇಷತೆ ಏನು?:ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳೇ ಈ ರೈಲಿನ ವಿಶೇಷತೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿವೆ. ವಂದೇ ಭಾರತ್ ರೈಲು ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ದೇಶೀಯ ನಿರ್ಮಿತ ವಂದೇ ಭಾರತ್ ರೈಲಿನ 3ನೇ ಆವೃತ್ತಿ ಇದಾಗಿದ್ದು, ಮೊದಲ 2 ರೈಲುಗಳಿಗಿಂತ ವಿನೂತನ ಹಾಗೂ ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತವಾದರೂ ಪ್ರಯಾಣದ ಅನುಭವ ವಿಶೇಷವಾಗಿರುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ. 45ರಷ್ಟು ಕಡಿಮೆ ಇರಲಿದೆ.
ರೈಲು ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಸ್ಲೈಡಿಂಗ್ ಡೋರ್ಸ್, ಪ್ರತ್ಯೇಕ ಲೈಟ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಅಟೆಂಡೆಂಟ್ ಕಾಲ್ ಬಟನ್‌ಗಳು, ಬಯೋ-ಟಾಯ್ಲೆಟ್‌ಗಳು, ಸ್ವಯಂಚಾಲಿತ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು, ಸಿಸಿಟಿವಿ ಕ್ಯಾಮೆರಾಗಳು, ಒರಗಿಕೊಳ್ಳುವ ಸೌಲಭ್ಯ ಮತ್ತು ಆರಾಮದಾಯಕ ಆಸನಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ.