ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದಕ್ಕೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಪ್ರಶ್ನೆ ಮಾಡಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇನ್ನೊಂದು ಮನ್ ಕಿ ಬಾತ್. ಆದರೆ ಮಣಿಪುರ ಹಿಂಸಾಚಾರದ ಬಗ್ಗೆ ಮೌನ ಎಂದು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವಿಪತ್ತು ನಿರ್ವಹಣೆಗಳ ಸಾಮರ್ಥ್ಯದ ಬಗ್ಗೆ ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಯಾಕೆ ಮೌನ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಅವರು ಇನ್ನೂ ಜನರಲ್ಲಿ ಶಾಂತಿಗಾಗಿ ಮನವಿ ಮಾಡಿಲ್ಲ. ಆಡಿಟ್ ಮಾಡಲಾಗದ ಪಿಎಂ ಕೇರ್ಸ್ ಫಂಡ್ ಇದೆ. ಆದರೆ ಪ್ರಧಾನಿಗೆ ಮಣಿಪುರದ ಬಗ್ಗೆ ಕಾಳಜಿ ಇಲ್ಲವೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್, ಈಗ ಮನ್ ಕಿ ಬಾತ್ ಅಲ್ಲ. ಮಣಿಪುರ ಕಿ ಬಾತ್‌ನ ಸಮಯವಾಗಿದೆ ಎಂದು ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಟಿಎಂಸಿ ಲೋಕಸಭಾ ಸದಸ್ಯ ಮಹುವಾ ಮೊಯಿತ್ರಾ " ಮನ್ ಕಿ ಬಾತ್ ಸಾಕು. ಈಗ ಮಣಿಪುರ ಕಿ ಬಾತ್‌ನ ಸಮಯವಾಗಿದೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ ಎಂದು ಹೇಳಿದ್ದಾರೆ.
ಮಣಿಪುರ್ ಹಿಂಸಾಚಾರ ಹಿನ್ನೆಲೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿವೆ. ಶನಿವಾರ ರಾತ್ರಿ ಮಣಿಪುರದ ರಾಜಧಾನಿ ಇಂಫಾಲ್‌ನ ಹಿಂಸಾಚಾರ ನಡೆದಿರುವ ಪ್ರದೇಶದಲ್ಲಿ ಭಾರತೀಯ ಸೇನೆ ಫ್ಲಾಗ್ ಮಾರ್ಚ್ ನಡೆಸಿದೆ.
ಪಶ್ಚಿಮ ಇಂಫಾಲ್ನಲ್ಲಿ ರೇಡಿಯೋ ಒಡೆದು ಪ್ರತಿಭಟನೆ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದಕ್ಕೆ ಜನರು ರೆಡಿಯೋ ಒಡೆದುಹಾಕಿ ತಮ್ಮ ಆಕ್ರೋಶ ಹೊರಹಾಕಿದರು. ಇಂದು ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು ತಮ್ಮ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮಣಿಪುರದ ಜನರು ತಮ್ಮ ಮನ್ ಕಿ ಬಾತ್‌ನ ರುಚಿಯನ್ನು ಮೋದಿಗೆ ನೀಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ಪಶ್ಚಿಮ ಇಂಫಾಲ್‌ನ ರಸ್ತೆ ಮಧ್ಯದಲ್ಲೇ ರೇಡಿಯೋಗಳನ್ನು ಒಡೆದು ಹಾಕುವುದು ಮತ್ತು 'ಮನ್ ಕಿ ಬಾತ್' ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು.