ವಾರಾಣಸಿ(ಉತ್ತರ ಪ್ರದೇಶ): ದೇಶಕ್ಕಾಗಿ ಕೇವಲ ಪದವಿ ಪಡೆದ ಯುವಕರನ್ನ ತಯಾರು ಮಾಡುವ ಬದಲು ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಆಯೋಜನೆಗೊಂಡಿದ್ದ ಅಖಿಲ ಭಾರತ ಶಿಕ್ಷಾ ಸಮಾಗಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಬರಮಾಡಿಕೊಂಡ ಸಿಎಂ ಯೋಗಿ ಆದಿತ್ಯನಾಥ್ ಹೊಸ ಶಿಕ್ಷಣ ನೀತಿಯ ಬಗ್ಗೆ ಅನೇಕ ವಿಷಯ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ದೇಶ ಮುನ್ನಡೆಸಲು ಮಾನವ ಸಂಪನ್ಮೂಲ ಬೇಕು. ಹೊಸ ಶಿಕ್ಷಣ ನೀತಿಯು ಯುವಕರಲ್ಲಿ ಕೌಶಲ್ಯ ಮತ್ತು ಆತ್ಮವಿಶ್ವಾಸ ಹೊಂದಲು ವೇದಿಕೆಯಾಗಿದೆ ಎಂದು ಹೇಳಿದರು. ಹೊಸ ಶಿಕ್ಷಣ ನೀತಿ ಮಾತೃಭಾಷೆಯಲ್ಲೂ ಅಧ್ಯಯನ ಮಾಡಲು ದಾರಿ ಮಾಡಿಕೊಟ್ಟಿದೆ ಎಂದ ಅವರು, ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳ ಪ್ರತಿಭೆ, ಆದ್ಯತೆಗಳಿಗೆ ಅನುಗುಣವಾಗಿ ನುರಿತರನ್ನಾಗಿಸಲು ಗಮನ ನೀಡಲಾಗಿದೆ. ದೇಶ ಮುನ್ನಡೆಸಲು ಇಂದಿನ ಯುವಕರು ಆತ್ಮವಿಶ್ವಾಸ, ಕೌಶಲ್ಯ ಹಾಗೂ ಪ್ರಾಯೋಗಿಕವಾಗಿರಬೇಕು ಎಂದರು.
ಸಂಸ್ಕೃತದಂತಹ ಪ್ರಾಚೀನ ಭಾರತೀಯ ಭಾಷೆ ಮುಂದಕ್ಕೆ ತೆಗೆದುಕೊಂಡು ಹೋಗಲು ರಾಷ್ಟ್ರೀಯ ಶಿಕ್ಷಣ ನೀತಿ ವೇದಿಕೆಯಾಗಿದ್ದು, ನಾವು ಕೇವಲ ಪದವಿಗಳೊಂದಿಗೆ ಯುವಕರನ್ನ ತಯಾರು ಮಾಡಬೇಕಾಗಿಲ್ಲ. ದೇಶದ ಶಿಕ್ಷಣವನ್ನ ಸಂಕುಚಿತ ಚಿಂತನೆಗಳ ಮಿತಿಯಿಂದ ಹೊರತರುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶವಾಗಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು ಎಂದಿರುವ ಪ್ರಧಾನಿ ಮೋದಿ, ಕೋವಿಡ್ನಂತಹ ದೊಡ್ಡ ಸಾಂಕ್ರಾಮಿಕ ರೋಗದಿಂದ ನಾವು ವೇಗವಾಗಿ ಚೇತರಿಸಿಕೊಂಡಿದ್ದೇವೆ. ಜೊತೆಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ರಾಷ್ಟ್ರವಾಗಿದ್ದೇವೆ ಎಂದರು. ಯೋಗಿ ಆಧಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ 2.0 ಸರ್ಕಾರ 100 ದಿನ ಪೂರ್ಣಗೊಳಿಸಿದ್ದು, ಇದರ ಬೆನ್ನಲ್ಲೇ 1,200 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ನಮೋ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದಾರೆ.