ಕರ್ನಾಟಕ

karnataka

ETV Bharat / bharat

ಪಿಎಂ ಕಿಸಾನ್ ಯೋಜನೆ: 15ನೇ ಕಂತಿನ 18 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ - ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ವಿಧಾನಸಭಾ

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.

Prime Minister Narendra Modi releases the 15th instalment
Prime Minister Narendra Modi releases the 15th instalment

By ETV Bharat Karnataka Team

Published : Nov 15, 2023, 3:46 PM IST

ಖುಂಟಿ (ಜಾರ್ಖಂಡ್) :ಪಿಎಂ - ಕಿಸಾನ್ ಯೋಜನೆಯ 15 ನೇ ಕಂತಿನ 18,000 ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶಾದ್ಯಂತದ 8 ಕೋಟಿಗೂ ಹೆಚ್ಚು ರೈತರಿಗೆ ಬಿಡುಗಡೆ ಮಾಡಿದರು. ಜಾರ್ಖಂಡ್​ನ ಖುಂಟಿ ಜಿಲ್ಲೆಯಲ್ಲಿ ನಡೆದ ಜನ್​ಜಾತೀಯ ಗೌರವ್ ದಿವಸ್ ಆಚರಣೆಯ ಸಮಾರಂಭದ ವೇದಿಕೆಯಲ್ಲಿ ಬಟನ್ ಕ್ಲಿಕ್ ಮಾಡುವ ಮೂಲಕ ಪ್ರಧಾನಿ ಹಣವನ್ನು ಡಿಜಿಟಲ್ ರೂಪದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ರೈತರಿಗೆ ಅವರ ಕೃಷಿ ಮತ್ತು ಇತರ ಪ್ರಾಸಂಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ನೀಡುವ ಸಹಾಯಧನದ ಯೋಜನೆ ಇದಾಗಿದೆ. ಈ ಯೋಜನೆಯಡಿ, ವರ್ಷಕ್ಕೆ 6,000 ರೂ.ಗಳ ಆರ್ಥಿಕ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಕಂತಿಗೆ ಮೊದಲು 2.62 ಲಕ್ಷ ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿತ್ತು.

ಏತನ್ಮಧ್ಯೆ, ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳ ಮೊದಲು ಹಣ ಬಿಡುಗಡೆ ಮಾಡಿರುವುದನ್ನು ಕಾಂಗ್ರೆಸ್ ಸರ್ಕಾರ ಪ್ರಶ್ನಿಸಿದೆ. ಉದ್ದೇಶಪೂರ್ವಕವಾಗಿ ಚುನಾವಣೆಗೂ ಮುನ್ನ ಹಣ ಬಿಡುಗಡೆ ಮಾಡಲಾಯಿತಾ ಎಂದು ಅದು ಪ್ರಶ್ನಿಸಿದೆ. ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನೆರೆಯ ಛತ್ತೀಸಗಢದಲ್ಲಿ ಅಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನವೆಂಬರ್ 7ರಂದು ನಡೆದಿತ್ತು.

"ಪಿಎಂ-ಕಿಸಾನ್ ಅಡಿ 15 ನೇ ಕಂತು ಇಂದು ಅಂದರೆ ನವೆಂಬರ್ 15, 2023 ರಂದು ಬರಲಿದೆ. ಈಗ ಛತ್ತೀಸ್​​​ಗಢ ಮತ್ತು ಮಧ್ಯಪ್ರದೇಶದಲ್ಲಿ ಎರಡು ದಿನಗಳಲ್ಲಿ, ರಾಜಸ್ಥಾನದಲ್ಲಿ 10 ದಿನಗಳಲ್ಲಿ ಮತ್ತು ತೆಲಂಗಾಣದಲ್ಲಿ 15 ದಿನಗಳಲ್ಲಿ ಚುನಾವಣೆಗಳು ನಡೆಯಬೇಕಿರುವಾಗ, 15 ನೇ ಕಂತನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಈ ವಿಳಂಬ ಉದ್ದೇಶಪೂರ್ವಕವಲ್ಲವೇ?" ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಪ್ರಶ್ನಿಸಿದ್ದಾರೆ. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಮತ್ತು ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದೆ. ಮಿಜೋರಾಂ ಜೊತೆಗೆ ಈ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.

ಪಿಎಂ ಕಿಸಾನ್ - ರೈತರಿಗಾಗಿ ಸಹಾಯವಾಣಿ ಸಂಖ್ಯೆಗಳು: ನಿಮಗೆ ಪಿಎಂ ಕಿಸಾನ್ ಕಂತಿನ ಬಗ್ಗೆ ದೂರು ಸಂದೇಹಗಳಿದ್ದರೆ, ನೀವು ಕಿಸಾನ್ ಇಮೇಲ್ ಐಡಿ pmkisan-ict@gov.in ನಲ್ಲಿ ಸಂಪರ್ಕಿಸಬಹುದು. ಇದಲ್ಲದೇ, ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆ - 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ : ಯಾರಿಗೆ ಸೇರಲಿದೆ ಸಹಾರಾದ ₹25 ಸಾವಿರ ಕೋಟಿ? ಹೂಡಿಕೆದಾರರ ಕತೆ ಏನು?

ABOUT THE AUTHOR

...view details