ಕರ್ನಾಟಕ

karnataka

ಪೊಲೀಸರಿಗೆ ದೇಶಾದ್ಯಂತ ಒಂದೇ ರೀತಿಯ ಸಮವಸ್ತ್ರ: ಪ್ರಧಾನಿ ಮೋದಿ ಪ್ರಸ್ತಾಪ

By

Published : Oct 28, 2022, 5:04 PM IST

ಸಂವಿಧಾನದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದರೂ ಅದು ದೇಶದ ಏಕತೆ ಮತ್ತು ಸಮಗ್ರತೆಗೆ ಸಮಾನವಾದ ಸಂಬಂಧ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

pm-modi-moots-idea-of-one-nation-one-uniform-for-police
ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಪರಿಕಲ್ಪನೆ: ಇದು 100 ವರ್ಷಗಳ ನಂತರವಾದರೂ ಸಂಭವಿಸಬಹುದು ಎಂದ ಮೋದಿ

ನವದೆಹಲಿ: ದೇಶಾದ್ಯಂತ ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಪರಿಕಲ್ಪನೆಯನ್ನು ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, ಇದು ಕೇವಲ ಪರಿಗಣನೆಗೆ ಸಲಹೆಯಾಗಿದೆ. ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಶುಕ್ರವಾರದಿಂದ ಆರಂಭವಾದ ಗೃಹ ಸಚಿವಾಲಯದ ಎರಡು ದಿನಗಳ ಚಿಂತನ್ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಪೊಲೀಸ್ ಪಡೆಗಳ ಗುರುತು ಒಂದೇ ಆಗಿರಬೇಕೆಂದು ನಾನು ಭಾವಿಸುತ್ತೇನೆ. ಪೊಲೀಸರ ಕುರಿತಾದ ಒಂದು ರಾಷ್ಟ್ರ, ಒಂದು ಸಮವಸ್ತ್ರ ಎಂಬುದು ಕೇವಲ ಒಂದು ಕಲ್ಪನೆ. ನಾನು ಅದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಸುಮ್ಮನೆ ಯೋಚಿಸಿ, ಇದು ಒಂದು ದಿನ ಸಂಭವಿಸಬಹುದು. 5, 50 ಅಥವಾ 100 ವರ್ಷಗಳ ನಂತರವಾದರೂ ಈ ಯೋಚನೆ ಜಾರಿಗೆ ಬರಬಹುದು. ಆದರೆ, ಈ ಬಗ್ಗೆ ಒಮ್ಮೆ ಯೋಚಿಸೋಣ ಎಂದರು.

ಒಂದು ರಾಷ್ಟ್ರ, ಒಂದು ಸಮವಸ್ತ್ರ ಕಲ್ಪನೆಯು ಗುಣಮಟ್ಟವನ್ನು ಖಾತ್ರಿ ಪಡಿಸುವುದು ಮಾತ್ರವಲ್ಲದೇ ಕಾನೂನು ಜಾರಿ ಸಿಬ್ಬಂದಿಗೆ ಸಾಮಾನ್ಯ ಗುರುತು ಒದಗಿಸುತ್ತದೆ. ಏಕೆಂದರೆ ಜನತೆ ಪೊಲೀಸರನ್ನು ದೇಶದಲ್ಲಿ ಎಲ್ಲಿಯಾದರೂ ಗುರುತಿಸುತ್ತಾರೆ. ಇದೇ ವೇಳೆ ರಾಜ್ಯಗಳು ತಮ್ಮ ಸಂಖ್ಯೆ ಅಥವಾ ಚಿಹ್ನೆಯನ್ನು ಹೊಂದಬಹುದು ಎಂದು ಅವರು ಹೇಳಿದರು.

ಸಂವಿಧಾನದ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದರೂ ಅದು ದೇಶದ ಏಕತೆ ಮತ್ತು ಸಮಗ್ರತೆಗೆ ಸಮಾನವಾದ ಸಂಬಂಧ ಹೊಂದಿದೆ. ಪ್ರತಿಯೊಂದು ರಾಜ್ಯವೂ ಇದನ್ನು ಅರಿತುಕೊಳ್ಳಬೇಕು ಮತ್ತು ಪರಸ್ಪರ ಸ್ಫೂರ್ತಿ ಪಡೆಯಬೇಕು. ಈ ಮೂಲಕ ಆಂತರಿಕ ಭದ್ರತೆಗಾಗಿ ಒಟ್ಟಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ದಿನದ ತಮ್ಮ ಭಾಷಣದಲ್ಲಿ ಘೋಷಿಸಿದ್ದ 'ವಿಷನ್ 2047' ಮತ್ತು 'ಪಂಚ ಪ್ರಾಣ' ಅನುಷ್ಠಾನಕ್ಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯವು ಎರಡು ದಿನಗಳ ಚಿಂತನ್ ಶಿಬಿರ ಆಯೋಜಿಸಿದೆ.

ಇದರಲ್ಲಿ ಗೃಹ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮಹಾನಿರ್ದೇಶಕರು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ (ಸಿಪಿಒಗಳು) ಅಧಿಕಾರಿಗಳು ಭಾಗವಹಿಸಿದ್ದಾರೆ.

ಇದನ್ನೂ ಓದಿ:ಗನ್​ ಅಥವಾ ಪೆನ್​ ಹಿಡಿದ ಎಲ್ಲ ರೀತಿಯ ಮಾವೋವಾದ ಮಟ್ಟ ಹಾಕಬೇಕು: ಪ್ರಧಾನಿ ಮೋದಿ

ABOUT THE AUTHOR

...view details