ನವದೆಹಲಿ: ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಲಾಗಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಜಪಾನ್‌ಗೆ ತೆರಳಿದ್ದಾರೆ. ಜಪಾನ್ ಭೇಟಿಯ ಬಳಿಕ ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾಕ್ಕೂ ಭೇಟಿ ನೀಡಲಿದ್ದಾರೆ.
ಜಿ7 ಶೃಂಗಸಭೆ ಹಿರೋಷಿಮಾದಲ್ಲಿ ಮೇ 19ರಿಂದ 21 ರವರೆಗೆ ನಡೆಯಲಿದೆ. ಈ ವರ್ಷ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಹತ್ವದ್ದಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, "ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಭಾಗವಹಿಸಲು ಹಿರೋಷಿಮಾಕ್ಕೆ ತೆರಳುತ್ತಿದ್ದೇನೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಕಿಶಿಡಾ ಅವರನ್ನು ಮತ್ತೊಮ್ಮೆ ಭೇಟಿಯಾಗಲು ಸಂತೋಷವಾಗುತ್ತಿದೆ. ಈ ವರ್ಷ ಭಾರತವು ಡಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಈ ಜಿ7 ಶೃಂಗಸಭೆಯಲ್ಲಿ ಭಾಗಿಯಾಗುವುದು ಅರ್ಥಪೂರ್ಣ" ಎಂದು ತಿಳಿಸಿದ್ದಾರೆ. ಹಾಗೆಯೇ, ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?
ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ವೈವಿಧ್ಯಮಯ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಶಾಂತಿ, ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿ, ಸಮೃದ್ಧಿಯಂತಹ ವಿಷಯಗಳ ಕುರಿತು ಪಾಲುದಾರ ರಾಷ್ಟ್ರಗಳೊಂದಿಗೆ ಚರ್ಚಿಸಲಾಗುತ್ತದೆ. ಜೊತೆಗೆ ಆಹಾರ, ರಸಗೊಬ್ಬರ, ಭದ್ರತೆ, ಆರೋಗ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಹಕಾರ ವಿಷಯಗಳ ಕುರಿತು ಮಾತು ನಡೆಯಲಿದ್ದು, ಶೃಂಗಸಭೆಯ ಜೊತೆಗೆ ಕೆಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ.